ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಬುಧವಾರ ಸಭೆ ನಡೆಸಿದ್ದಾರೆ. ಆರ್ಥಿಕ ಮತ್ತು ವಾಣಿಜ್ಯ ಸಹಕಾರವನ್ನು ಬಲಪಡಿಸಲು ಹಾಗೂ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಉಭಯ ರಾಷ್ಟ್ರಗಳ ಪ್ರಯತ್ನಗಳ ಬಗ್ಗೆ ಸಭೆ ವೇಳೆ ಚರ್ಚೆ ನಡೆಸಲಾಯಿತು.
ಭಾರತ ಮತ್ತು ಯುಎಇ ನಾಯಕರು ಫೆಬ್ರವರಿ 13ರಂದು ಅಬುಧಾಬಿಯಲ್ಲಿ ಭೇಟಿಯಾದರು. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುಎಇಗೆ ಸ್ವಾಗತಿಸಿದರು. ಫೆಬ್ರವರಿ 14ರಂದು ದುಬೈನಲ್ಲಿ ನಡೆದ ವಿಶ್ವ ಸರ್ಕಾರಿ ಶೃಂಗಸಭೆ 2024ರಲ್ಲಿ ಮಾತನಾಡಲು ಆಹ್ವಾನ ಸ್ವೀಕರಿಸಿದ್ದಕ್ಕಾಗಿ ಯುಎಇ ಅಧ್ಯಕ್ಷರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
2022ರ ಮೇ 1ರಂದು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಜಾರಿಗೆ ಬಂದಾಗಿನಿಂದ ಯುಎಇ - ಭಾರತ ವ್ಯಾಪಾರ ಸಂಬಂಧಗಳಲ್ಲಿ ಉತ್ತಮ ಬೆಳವಣಿಗೆಯಾಗಿದ್ದು, ಇದನ್ನು ಉಭಯ ನಾಯಕರು ಸ್ವಾಗತಿಸಿದರು. ಒಪ್ಪಂದದ ಪರಿಣಾಮವಾಗಿ, 2022-23ರಲ್ಲಿ ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯವಹಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಜೊತೆಗೆ ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ.
ಈ ನಿಟ್ಟಿನಲ್ಲಿ, 2030ರ ಗುರಿಯ ವರ್ಷಕ್ಕಿಂತ ಮುಂಚಿತವಾಗಿ ದ್ವಿಪಕ್ಷೀಯ ವ್ಯಾಪಾರವನ್ನು 100 ಅಮೆರಿಕನ್ ಬಿಲಿಯನ್ಗೆ ಏರಿಸುವ ಬಗ್ಗೆ ಉಭಯ ನಾಯಕರು ಆಶಾವಾದ ವ್ಯಕ್ತಪಡಿಸಿದರು. UAE-India CEPA ಕೌನ್ಸಿಲ್ (UICC) ಯ ಔಪಚಾರಿಕ ಅನಾವರಣವನ್ನು ಸಹ ಉಭಯ ನಾಯಕರು ಒಪ್ಪಿಕೊಂಡರು. ಇದು ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ಪ್ರಕಾರ, ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಎರಡೂ ದೇಶಗಳಲ್ಲಿ ವಿವಿಧ ವಲಯಗಳಲ್ಲಿ ಹೂಡಿಕೆಗಳನ್ನು ಮತ್ತಷ್ಟು ಉತ್ತೇಜಿಸಲು ಪೂರಕವಾಗಿದೆ ಎಂಬುದನ್ನು ನಾಯಕರು ಗಮನಿಸಿದ್ದಾರೆ. 2023ರಲ್ಲಿ ಯುಎಇ, ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರ ಮತ್ತು ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ಏಳನೇ ಅತಿದೊಡ್ಡ ಮೂಲವಾಗಿದೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಯುಎಇಯೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಎರಡಕ್ಕೂ ಭಾರತ ಸಹಿ ಹಾಕಿದೆ.
ಇದನ್ನೂ ಓದಿ:ಇಂದು ಸುಪ್ರೀಂನಿಂದ ಎಲೆಕ್ಟೋರಲ್ ಬಾಂಡ್ಸ್ ಸ್ಕೀಂ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ತೀರ್ಪು
ಕಳೆದ ಒಂಭತ್ತು ವರ್ಷಗಳಲ್ಲಿ ಯುಎಇಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಳನೇ ಬಾರಿ ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ 1 ರಂದು ದುಬೈನಲ್ಲಿ ನಡೆದ ಯುಎನ್‌ಎಫ್‌ಸಿಸಿಸಿ ಸಿಒಪಿ 28 ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಿ ಕೊನೆಯ ಬಾರಿಗೆ ಯುಎಇಗೆ ಭೇಟಿ ನೀಡಿದ್ದರು. ಅಲ್ಲಿ ಯುಎಇ ಅಧ್ಯಕ್ಷರನ್ನು ಭೇಟಿ ಆಗಿದ್ದರು.