ಕರ್ನಾಟಕ

karnataka

ETV Bharat / bharat

ದ್ವಾರಕಾದಲ್ಲಿ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ 'ಸುದರ್ಶನ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುಜರಾತ್‌ನ ದ್ವಾರಕಾದಲ್ಲಿ ಭಾರತದ ಅತಿ ಉದ್ದದ ಕೇಬಲ್ ಸೇತುವೆ 'ಸುದರ್ಶನ ಸೇತು'ವನ್ನು ಉದ್ಘಾಟಿಸಿದರು.

Sudarshan Setu bridge inaugurated Prime Minister Narendra Modi
ದ್ವಾರಕಾದಲ್ಲಿ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ 'ಸುದರ್ಶನ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

By PTI

Published : Feb 25, 2024, 11:36 AM IST

ದ್ವಾರಕಾ(ಗುಜರಾತ್): ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಇಲ್ಲಿನ ಓಖಾ ಮುಖ್ಯಭೂಮಿ ಮತ್ತು ಬೆಟ್ ದ್ವಾರಕಾವನ್ನು ಸಂಪರ್ಕಿಸುವ ಸುಮಾರು 2.32 ಕಿ.ಮೀ ಉದ್ದದ ದೇಶದ ಅತಿ ಉದ್ದದ ಕೇಬಲ್ ಸೇತುವೆ 'ಸುದರ್ಶನ ಸೇತು'ವನ್ನು ಇಂದು ಅವರು ಲೋಕಾರ್ಪಣೆ ಮಾಡಿದರು.

ಇದಕ್ಕೂ ಮೊದಲು ಇದನ್ನು 'ಸಿಗ್ನೇಚರ್ ಸೇತುವೆ' ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಸೇತುವೆಯ ಹೆಸರನ್ನು 'ಸುದರ್ಶನ ಸೇತು' ಅಥವಾ ಸುದರ್ಶನ ಸೇತುವೆ ಎಂದು ಬದಲಿಸಲಾಗಿದೆ.

ಬೆಟ್ ದ್ವಾರಕಾ ಎಂಬುದು ಓಖಾ ಬಂದರಿನ ಸಮೀಪದ ದ್ವೀಪ. ದ್ವಾರಕಾ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವಿದೆ.

ತಮ್ಮ ಕನಸಿನ ಯೋಜನೆಯಾದ ಓಖಾ-ಬೆಟ್ ದ್ವಾರಕಾ ಸೇತುವೆಯ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ, ''ಗುಜರಾತ್‌ನ ಅಭಿವೃದ್ಧಿ ಪಯಣಕ್ಕೆ ಇದು ಮಹತ್ವದ ಸಂದರ್ಭವಾಗಲಿದೆ'' ಎಂದು ಹೇಳಿದರು. ಈ ಕಾರ್ಯಕ್ರಮಕ್ಕೂ ಮುನ್ನ ಅವರು ಬೆಟ್ ದ್ವಾರಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.

ಸುದರ್ಶನ ಸೇತುವೆಯ ವಿಶೇಷತೆಗಳು: ಈ ಸೇತುವೆಯಿಂದ ಪ್ರಸಿದ್ಧ ದ್ವಾರಕಾಧೀಶ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮತ್ತು ಯಾತ್ರಿಕರಿಗೆ ಅನುಕೂಲವಾಗಲಿದೆ. ಸೇತುವೆಯ ಶಂಕುಸ್ಥಾಪನೆ 2017ರಲ್ಲಿ ನೆರವೇರಿತ್ತು. ಇದು ಓಖಾ ಮತ್ತು ಬೆಟ್ ದ್ವಾರಕಾ ನಡುವೆ ಪ್ರಯಾಣಿಸುವ ಭಕ್ತರಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಇದರ ನಿರ್ಮಾಣದ ಮೊದಲು, ಯಾತ್ರಿಕರು ದ್ವಾರಕಾಧೀಶ್ ದೇವಾಲಯ ತಲುಪಲು ದೋಣಿಗಳನ್ನು ಅವಲಂಬಿಸಬೇಕಿತ್ತು. 2.5 ಕಿ.ಮೀ ಉದ್ದದ ಈ ಸೇತುವೆಯನ್ನು 979 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಾಲ್ಕು ಪಥದ 27.20 ಮೀಟರ್ ಅಗಲವಿದ್ದು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಕಾಲುದಾರಿಗಳನ್ನು ಹೊಂದಿದೆ.

ಸಿಗ್ನೇಚರ್ ಸೇತುವೆ ವಿಶಿಷ್ಟ ವಿನ್ಯಾಸ ಹೊಂದಿದೆ. ಕಾಲುದಾರಿಯ ಎರಡೂ ಬದಿಗಳನ್ನು ಭಗವದ್ಗೀತೆಯ ಶ್ಲೋಕಗಳು ಹಾಗೂ ಶ್ರೀಕೃಷ್ಣನ ಚಿತ್ರಗಳಿಂದ ಅಲಂಕರಿಸಲಾಗಿದೆ. ಫುಟ್‌ಪಾತ್‌ನ ಮೇಲ್ಭಾಗದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.

ಜಾಮ್‌ನಗರದಲ್ಲಿ ಮೋದಿ ರೋಡ್‌ ಶೋ: ಪ್ರಧಾನಿ ಮೋದಿ ಶನಿವಾರ ರಾತ್ರಿ ಜಾಮ್‌ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಎರಡು ದಿನಗಳ ಗುಜರಾತ್ ಪ್ರವಾಸ ಪ್ರಾರಂಭಿಸಿದ್ದರು. 'ಮೋದಿ, ಮೋದಿ' ಮತ್ತು 'ಭಾರತ್ ಮಾತಾ ಕೀ ಜೈ' ಘೋಷಣೆಗಳ ನಡುವೆ ಪ್ರಧಾನಿ ಬೆಂಗಾವಲು ಪಡೆ ಸರ್ಕ್ಯೂಟ್ ಹೌಸ್ ಕಡೆಗೆ ಚಲಿಸುತ್ತಿದ್ದಂತೆ, ರಸ್ತೆಯ ಎರಡೂ ಬದಿಗಳಲ್ಲಿ ಭಾರಿ ಸಂಖ್ಯೆಯ ಜನ ನಿಂತು ಸ್ವಾಗತಿಸಿದ್ದರು.

ಇದನ್ನೂ ಓದಿ:ಜುಲೈ 1ರಿಂದ ಭಾರತದಾದ್ಯಂತ ಹೊಸ ಅಪರಾಧ ನ್ಯಾಯ ಕಾನೂನುಗಳು ಜಾರಿ

ABOUT THE AUTHOR

...view details