ನವದೆಹಲಿ: ನೀಟ್- ಯುಜಿ 2024ರ ಪರೀಕ್ಷೆಗೆ ಅನುಮತಿ ನೀಡಲು ನಿರಾಕರಿಸಿದ ಆಗಸ್ಟ್ 2ರ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ. ಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯನ್ನು ವಜಾ ಮಾಡಿದೆ. ಕಾಜಲ್ ಕುಮಾರಿ ಮತ್ತು ಇತರರು ಅರ್ಜಿಯನ್ನು ಸಲ್ಲಿಸಿದ್ದು, ಈ ಕುರಿತು ಅಕ್ಟೋಬರ್ 22ರಂದು ಪೀಠ ಅದೇಶ ಹೊರಡಿಸಿತ್ತು. ಇದನ್ನು ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ವೆಬ್ಸೈಟ್ ಖಾತೆಯಲ್ಲೂ ಸಹ ಅಪ್ಲೋಡ್ ಮಾಡಲಾಗಿತ್ತು.
ದಾಖಲೆ ಮುಖಾಂತರ ಸ್ಪಷ್ಟವಾಗಿ ಯಾವುದೇ ದೋಷವಿಲ್ಲ. ಸುಪ್ರೀಂ ಕೋರ್ಟ್ ನಿಯಮ 2013ರ ಆದೇಶ XLVII ನಿಯಮ 1ರ ಅಡಿ ಪರಿಶೀಲನೆಗಾಗಿ ಯಾವುದೇ ಪ್ರಕರಣವನ್ನು ಸ್ಥಾಪಿಸಿಲ್ಲ. ಈ ಹಿನ್ನೆಲೆ ಮರು ಪರಿಶೀಲನೆ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ ಎಂದು ಪೀಠ ತಿಳಿಸಿದೆ. ಇದೇ ವೇಳೆ ನ್ಯಾಯಾಲಯ ಮುಕ್ತ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೂಡ ವಜಾ ಮಾಡಿದೆ.
ಆಗಸ್ಟ್ 2ರಂದು ನೀಟ್ ಯುಜಿ 2024 ಪರೀಕ್ಷೆಯನ್ನು ಹೊಸದಾಗಿ ನಡೆಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಪರೀಕ್ಷೆಯ ವ್ಯವಸ್ಥೆಯಲ್ಲಿಯ ಸೋರಿಕೆ ಅಥವಾ ಅಕ್ರಮ ನಡೆದಿದೆ ಎಂಬುದಕ್ಕೆ ತನ್ನ ದಾಖಲೆಯಲ್ಲಿ ಸಾಕಷ್ಟು ಪುರಾವೆಗಳಿಲ್ಲ. ಈ ಹಿನ್ನೆಲೆ ರದ್ದತಿ ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಕಳಂಕಿತ ಅಭ್ಯರ್ಥಿಗಳನ್ನು ಕಳಂಕಿತವಲ್ಲದ ಅಭ್ಯರ್ಥಿಗಳಿಂದ ಬೇರೆ ಮಾಡಲು ಸಾಧ್ಯವಿದ್ದಾಗ, ಪರೀಕ್ಷೆಯನ್ನು ರದ್ದು ಮಾಡುವುದರಿಂದ ಯಾವುದೇ ಸಮರ್ಥನೆ ಇಲ್ಲ. ಪರೀಕ್ಷೆ ರದ್ದು ಮಾಡಿದಲ್ಲಿ ಪರೀಕ್ಷೆಗಾಗಿ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳು ತೊಂದರೆಗೆ ಒಳಗಾಗುತ್ತಾರೆ. ಮರು ಪರೀಕ್ಷೆಗೆ ಆದೇಶ ನೀಡುವುದರಿಂದ ವರ್ಷದ ಶೈಕ್ಷಣಿಕ ವೇಳಾಪಟ್ಟಿಗೆ ಅಡ್ಡಿಯಾಗುತ್ತದೆ ಎಂದು ಪೀಠ ತಿಳಿಸಿದೆ.