ನವದೆಹಲಿ:ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ಇಂದಿನಿಂದ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವ್ಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಪರೀಕ್ಷೆಯನ್ನು ರದ್ದು ಮಾಡಲು ನಿರಾಕರಿಸಿದೆ. ಜೊತೆಗೆ ಶುಕ್ರವಾರ ಸಂಜೆಯೊಳಗೆ ವೆಬ್‌ಸೈಟ್‌ನಲ್ಲಿ ಕೇಂದ್ರವಾರು, ರಾಜ್ಯವಾರು ಫಲಿತಾಂಶವನ್ನು ಬಿಡುಗಡೆ ಮಾಡಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ಸೂಚಿಸಿತು.
2024ನೇ ಸಾಲಿನ NEET-UG ಪರೀಕ್ಷೆಯ ಫಲಿತಾಂಶವನ್ನು ಶನಿವಾರ (ಜುಲೈ 20) ಅಪರಾಹ್ನ 12 ಗಂಟೆಯೊಳಗೆ ಎನ್‌ಟಿಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಫಲಿತಾಂಶಗಳನ್ನು ಪ್ರಕಟಿಸುವಾಗ ಅಭ್ಯರ್ಥಿಗಳ ಗುರುತನ್ನು ಮರೆಮಾಚುವಂತೆಯೂ ಸಲಹೆ ನೀಡಲಾಗಿದೆ. ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಫಲಿತಾಂಶವನ್ನು ಕೇಂದ್ರವಾರು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಹಣಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆ:NEET-UG ಪರೀಕ್ಷೆಗೆ ಅಪಖ್ಯಾತಿ ತರಲು ಸೋರಿಕೆಯನ್ನು ನಡೆಸಲಾಗಿಲ್ಲ. ಇದನ್ನು ಕೇವಲ ಹಣಕ್ಕಾಗಿ ಮಾತ್ರ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿಚಾರಣೆ ವೇಳೆ ಹೇಳಿದರು. ಪೇಪರ್ ಸೋರಿಕೆ ಮಾಡುವ ಆಲೋಚನೆಯು ಪರೀಕ್ಷೆಯ ದಿಕ್ಕು ತಪ್ಪಿಸಲು ಅಲ್ಲ. ಇದು ಕೇವಲ ಹಣದಾಸೆಗೆ ಮಾಡಿದ ಕೃತ್ಯವಾಗಿದೆ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.