ಚೆನ್ನೈ: ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯ ಹೇರುವಿಕೆಯನ್ನು ಬಲವಾಗಿ ವಿರೋಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಏಕರೂಪದ ಹಿಂದಿ ಅಸ್ಮಿತೆ ಜಾರಿಗೆ ತರುತ್ತಿರುವುದರ ಪರಿಣಾಮವಾಗಿ 25ಕ್ಕೂ ಹೆಚ್ಚು ಪ್ರಾಚೀನ ಮಾತೃಭಾಷೆಗಳು ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಭೋಜ್ ಪುರಿ, ಅವಧಿ, ಬ್ರಜ್ ಮತ್ತು ಗರ್ವಾಲಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳನ್ನು ಹಿಂದಿ ನುಂಗಿ ಹಾಕಿದೆ ಎಂದು ಬರೆದಿದ್ದಾರೆ.
ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳು- ಸ್ಟಾಲಿನ್:"ಇತರ ರಾಜ್ಯಗಳ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಹಿಂದಿ ಎಷ್ಟು ಭಾರತೀಯ ಭಾಷೆಗಳನ್ನು ನುಂಗಿ ಹಾಕಿದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಭೋಜ್ ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂದೇಲಿ, ಗರ್ವಾಲಿ, ಕುಮಾವೊನಿ, ಮಗಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್ ಗಢಿ, ಸಂತಾಲಿ, ಅಂಗಿಕಾ, ಹೋ, ಖಾರಿಯಾ, ಖೋರ್ತಾ, ಕುರ್ಮಾಲಿ, ಕುರುಖ್, ಮುಂಡಾರಿ ಮತ್ತು ಇನ್ನೂ ಅನೇಕ ಭಾಷೆಗಳು ಈಗ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿವೆ. ಏಕರೂಪದ ಹಿಂದಿ ಅಸ್ಮಿತೆಯ ಹೇರುವಿಕೆಯು ಪ್ರಾಚೀನ ಮಾತೃಭಾಷೆಗಳನ್ನು ಕೊಲ್ಲುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರ ಎಂದಿಗೂ ಕೇವಲ 'ಹಿಂದಿ ಹೃದಯಭಾಗ'ಗಳಾಗಿರಲಿಲ್ಲ. ಅವರ ನಿಜವಾದ ಭಾಷೆಗಳು ಈಗ ಗತಕಾಲದ ಅವಶೇಷಗಳಾಗಿವೆ. ಇದರ ಪರಿಣಾಮ ಏನಾಗಲಿದೆ ಎಂಬುದು ನಮಗೆ ಗೊತ್ತಿರುವುದರಿಂದಲೇ ತಮಿಳುನಾಡು ಇದನ್ನು ಪ್ರತಿರೋಧಿಸುತ್ತದೆ" ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.