ಲಕ್ನೋ: ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕರಾಗಿ ಆಕಾಶ್ ಆನಂದ್ ಅವರನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಮರುನೇಮಿಸಿದ್ದಾರೆ. ಒಂದು ತಿಂಗಳ ಹಿಂದೆ ಆಕಾಶ್ ಆನಂದ್ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಸ್ವತಃ ಮಾಯಾವತಿ ತೆಗೆದು ಹಾಕಿದ್ದರು. ಆದರೆ ಸದ್ಯ ಈ ವಿಚಾರದಲ್ಲಿ ಯೂಟರ್ನ್ ಹೊಡೆದಿರುವ ಮಾಯಾವತಿ, ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ಮರುಸ್ಥಾಪಿಸಿದ್ದಾರೆ ಮತ್ತು ಅವರನ್ನು ಮತ್ತೊಮ್ಮೆ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಹೆಸರಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಮಧ್ಯೆ ಮಾಯಾವತಿ ಆಕಾಶ್ ಆನಂದ್ ಅವರನ್ನು ಪಕ್ಷದ ಹುದ್ದೆಯಿಂದ ತೆಗೆದು ಹಾಕಿದ್ದರು ಮತ್ತು ಅವರು ಪ್ರಬುದ್ಧರಾದ ನಂತರ ತಮ್ಮ ನಿರ್ಧಾರ ಬದಲಾಯಿಸುವುದಾಗಿ ಹೇಳಿದ್ದರು.
ಆದರೆ ಈಗ ತಮ್ಮ ಸೋದರಳಿಯನನ್ನು ಮುಂಬರುವ ಉತ್ತರಾಖಂಡ ವಿಧಾನಸಭಾ ಉಪಚುನಾವಣೆಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಅವರು ಹೆಸರಿಸಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಆಕಾಶ್ ಆನಂದ್ ಅವರ ಆಕ್ರಮಣಕಾರಿ ಭಾಷೆಯ ಬಗ್ಗೆ ಟೀಕೆಗಳು ವ್ಯಕ್ತವಾದ ನಂತರ ಮಾಯಾವತಿ ಅವರನ್ನು ಹುದ್ದೆಯಿಂದ ತೆಗೆದುಹಾಕುವ ನಿರ್ಧಾರ ತೆಗೆದುಕೊಂಡಿದ್ದರು. ಕೇಂದ್ರ ಸರ್ಕಾರವನ್ನು ಭಯೋತ್ಪಾದಕರ ಸರ್ಕಾರ ಎಂದು ಕರೆದ ಅವರ ವಿರುದ್ಧ ಸೀತಾಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
"ಈ ಸರ್ಕಾರವು ಬುಲ್ಡೋಜರ್ ಮತ್ತು ದೇಶದ್ರೋಹಿಗಳ ಸರ್ಕಾರವಾಗಿದೆ. ತನ್ನ ಯುವಕರನ್ನು ಹಸಿವಿನಿಂದ ಸಾಯಿಸುವ ಮತ್ತು ತನ್ನ ಹಿರಿಯರನ್ನು ಗುಲಾಮರನ್ನಾಗಿ ಮಾಡುವ ಭಯೋತ್ಪಾದಕ ಸರ್ಕಾರವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ರೀತಿಯಲ್ಲೇ ಈ ಸರ್ಕಾರವೂ ಇದೆ" ಎಂದು ಅವರು ಸೀತಾಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು.