ಕೊಚ್ಚಿ(ಕೇರಳ):ಪ್ರಧಾನಿ ನರೇಂದ್ರ ಮೋದಿ ಅವರು 'ಕಾಂಗ್ರೆಸ್ ಪ್ರಣಾಳಿಕೆ' ವಿರುದ್ಧ ನೀಡಿದ ಹೇಳಿಕೆ ಚರ್ಚೆಗೀಡು ಮಾಡಿದೆ. ತನ್ನ ಭರವಸೆಗಳ ಬಗ್ಗೆ ಪ್ರಧಾನಿ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಪಕ್ಷದ ಚುನಾವಣಾ ಭರವಸೆಗಳ ಬಗ್ಗೆ ತಿಳಿವಳಿಕೆ ನೀಡಲು ಮೋದಿ ಬಳಿ ಸಮಯ ಕೋರಿದೆ.
ಮೋದಿ ಹೇಳಿದ್ದೇನು?: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಒಂದು ಸಮುದಾಯ, ನುಸುಳುಕೋರರು, ಹೆಚ್ಚು ಮಕ್ಕಳಿದ್ದವರಿಗೆ ಮಾತ್ರ ಹಂಚಿಕೆ ಮಾಡಲಿದೆ. ಇದನ್ನು ನೀವು ಮಾಡಲು ನೀವು ಅವಕಾಶ ನೀಡುತ್ತೀರಾ? ಎಂದು ಪ್ರಧಾನಿ ಮೋದಿ ರಾಜಸ್ಥಾನದಲ್ಲಿ ಭಾನುವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ.
ಕಾಂಗ್ರೆಸ್ ಅಭಿಯಾನ:ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಬಿಜೆಪಿ ನಾಯಕರು, ಲೋಕಸಭಾ ಅಭ್ಯರ್ಥಿಗಳಿಗೆ ಅದರ ಪ್ರತಿಗಳನ್ನು ಕಳುಹಿಸಿಕೊಡಲಾಗುವುದು. ಒಂದು ಲಕ್ಷ ಜನರ ಸಹಿಯೊಂದಿಗೆ ಚುನಾವಣಾ ಆಯೋಗಕ್ಕೆ ಪ್ರಧಾನಿ ಮೋದಿ ವಿರುದ್ಧ ದೂರು ನೀಡಲಾಗುವುದು ಎಂದು ಹೇಳಿದರು.
ದೇಶದ ಸಂಪನ್ಮೂಲದ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕಿದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವವರು ಇಂತಹ ಹೇಳಿಕೆಯನ್ನು ನೀಡಬಾರದು. ಪ್ರತಿ ಬಾರಿಯೂ ಮೋದಿ ಸುಳ್ಳು ಹೇಳುತ್ತಿದ್ದಾರೆ. ನಿನ್ನೆ ಭಾಷಣವೂ ಸುಳ್ಳಿನಿಂದಲೇ ಕೂಡಿತ್ತು ಎಂದು ಟೀಕಿಸಿದ್ದಾರೆ.
ಅಪಾಯಿಂಟ್ಮೆಂಟ್ ಕೊಡಿ:ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿವಳಿಕೆ ಮೂಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಅವರ ಬಳಿ ಸಮಯ ಕೋರಿದ್ದಾರೆ. ನಾವು ಅವರಿಗೆ ಚುನಾವಣಾ ಪ್ರಣಾಳಿಕೆಯ ಪ್ರತಿಯನ್ನು ನೀಡುತ್ತೇವೆ. ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಪ್ರಧಾನಿಗೆ ಪ್ರಣಾಳಿಕೆಯ ಪ್ರತಿಯನ್ನು ಕಳುಹಿಸಿ ಅಭಿಯಾನ ನಡೆಸಲಾಗುವುದು. ನಮ್ಮ ಪ್ರಣಾಳಿಕೆಯಲ್ಲಿ ಇಲ್ಲದ ಮಾತನ್ನು ಪ್ರಧಾನಿ ಹೇಳಿದ್ದಾರೆ. ಚುನಾವಣಾ ಲಾಭಕ್ಕಾಗಿ ದೇಶದಲ್ಲಿ ಕೋಮು ಧ್ರುವೀಕರಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಆಯೋಗದ ವಿರುದ್ಧ ಅಸಮಾಧಾನ:ಚುನಾವಣಾ ಆಯೋಗವು ಪ್ರಧಾನಿಗೆ ಏನೂ ಬೇಕಾದರೂ ಹೇಳಲು ಅನುಮತಿ ನೀಡಿದೆಯೇ? ಎಲ್ಲದರಲ್ಲೂ ಹಸ್ತಕ್ಷೇಪ ಮಾಡುವ ಆಯೋಗ ಈ ವಿಷಯದಲ್ಲಿ ಯಾಕೆ ಮೌನವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ, ಈ ವಿಷಯವನ್ನೇಕೆ ಪ್ರಶ್ನಿಸುತ್ತಿಲ್ಲ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ಚುನಾವಣಾ ಲಾಭಕ್ಕಾಗಿ ಕೋಮು ಭಾವನೆಗಳನ್ನು ಪ್ರಚೋದಿಸುವ ಮೂಲಕ ಭಾರತೀಯರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದರು.
ಇದನ್ನೂ ಓದಿ:ಸೂರತ್‌ನಿಂದ ಅಭ್ಯರ್ಥಿ ಅವಿರೋಧ ಆಯ್ಕೆ: ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಖಾತೆ ತೆರೆದ ಬಿಜೆಪಿ - SURAT LOK SABHA CONSTITUENCY