ಗ್ಯಾಂಗ್ಟಕ್, ಸಿಕ್ಕಿಂ: ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ದಿನದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಪತ್ನಿ ಕೃಷ್ಣ ಕುಮಾರಿ ರೈ ಸುದ್ದಿಯಾಗಿದ್ದಾರೆ. ನಾಮ್ಚಿ ಸಿಂಘಿತಾಂಗ್ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ತಮಾಂಗ್ ಅವರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 32 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಅಲ್ಲದೇ ಈ ಪಕ್ಷ ಲೋಕಸಭೆಯಲ್ಲೂ ಒಂದು ಸ್ಥಾನ ಗೆದ್ದಿದೆ. ಆದರೆ, ಇದೀಗ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಅವರು ಎಂಎಲ್ಎ ಸ್ಥಾನ ತ್ಯಜಿಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಕ್ಕೆ ಕಾರಣ ತಿಳಿಸಿರುವ ಮುಖ್ಯಮಂತ್ರಿ, ಇದು ಪಕ್ಷದ ಸರ್ವಾನುಮತದ ನಿರ್ಣಯ ಎಂದಿದ್ದಾರೆ.
ಪಕ್ಷದ ಒಮ್ಮತದ ನಿರ್ಧಾರದ ಅನುಸಾರವಾಗಿ ತಮ್ಮ ಪತ್ನಿ ಶಾಸಕಿ ಸ್ಥಾನ ತೊರೆದಿದ್ದಾಳೆ, ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃಷ್ಣ ಕುಮಾರಿ ರೈ ಅವರು, ಪಕ್ಷದ ಸಂಸದೀಯ ಸಮಿತಿ ಕೋರಿಕೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಕ್ಕಿಂ ಕ್ರಾಂತಿಕಾರಿ ಪಕ್ಷ ಸಮರ್ಥ ಮತ್ತು ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಅವಕಾಶ ನೀಡಲು ಬದ್ಧವಾಗಿದೆ. ನಾಮ್ಚಿ ಸಿಂಗಿತಾಂಗ್ ಕ್ಷೇತ್ರದ ನಿವಾಸಿಗಳು ಇದೀಗ ಮತ್ತೊಂದು ಬಾರಿ ಅವರ ಹಿತಾಸಕ್ತಿಗೆ ಕೆಲಸ ಮಾಡುವ ಶಾಸಕರನ್ನು ಆಯ್ಕೆ ಮಾಡುವ ಭರವಸೆ ಇದೆ ಎಂದು ಸಿಎಂ ತಿಳಿಸಿದ್ದಾರೆ.