ಮಂಡಿ(ಹಿಮಾಚಲ): ಬಾಲಿವುಡ್ ನಟಿ - ರಾಜಕಾರಣಿ ಕಂಗನಾ ರಣಾವತ್ ಬಾಯ್ತಪ್ಪಿ ಹೇಳಿದ ಮಾತೊಂದು ಭಾರಿ ಟ್ರೋಲ್ಗೆ ಕಾರಣವಾಗಿದೆ. ಹೌದು, ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಂಗನಾ ಚುನಾವಣಾ ಪ್ರಚಾರದ ಸಮಯದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ಬಾಯ್ತಪ್ಪಿ ತೇಜಸ್ವಿ ಯಾದವ್ ಬದಲು ತನ್ನದೇ ಪಕ್ಷದ ಸಂಸದ ತೇಜಸ್ವಿ ಸೂರ್ಯನ ಹೆಸರು ಹೇಳಿದ್ದರು.
ಪ್ರಚಾರ ಸಭೆಯಲ್ಲಿ ಮೋತಿ ಲಾಲ್ ನೆಹರು ಅವರಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ನೆಹರೂ - ಗಾಂಧಿ ಕುಟುಂಬದವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟದ ಇತರ ನಾಯಕ ವಿರುದ್ಧವು ಸಹ ಹರಿಹಾಯ್ದಿದ್ದರು. ಈ ವೇಳೆ ಮಾತಿನ ಭರದಲ್ಲಿ ಅವರು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬದಲಿಗೆ ತೇಜಸ್ವಿ ಸೂರ್ಯ ಹೆಸರು ಹೇಳಿ ಕಟುವಾಗಿ ಟೀಕಿಸಿದ್ದರು.
ಕಂಗನಾ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನ್ಸ್ ಅವರ ಈ ಹೇಳಿಕೆಗೆ ಟ್ರೋಲ್ ಮತ್ತು ಮೀಮ್‌ಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಪೋಸ್ಟ್ ಮಾಡಿ, "ಯಾರು ಈ ಮಹಿಳೆ ?" ಎಂದು ಲೇವಡಿ ಮಾಡಿದ್ದಾರೆ.