ನವದೆಹಲಿ: ಸಂಸತ್ತಿನಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 17ನೇ ಲೋಕಸಭೆಯ ಕೊನೆಯ ಬಜೆಟ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಮಧ್ಯಂತರ ಬಜೆಟ್ ಅಂತರ್ಗತ ಮತ್ತು ನಾವೀನ್ಯವಾಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ. ಇದು ವಿಕಸಿತ ಭಾರತದ ನಾಲ್ಕು ಆಧಾರ ಸ್ತಂಭಗಳಾದ ಯುವಕರು, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುತ್ತದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ 11,11,111 ಕೋಟಿ ರೂ.ಗಳನ್ನು ನೀಡಲಾಗಿದೆ. ನಾವು ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಹೇಳುವುದಾದರೆ ಇಂದೊಂದು ರೀತಿಯಲ್ಲಿ 'ಸ್ವೀಟ್ ಸ್ಪಾಟ್'. ಇದರೊಂದಿಗೆ 21ನೇ ಶತಮಾನದ ಭಾರತದ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವುದರ ಜೊತೆಗೆ ಯುವಕರಿಗೆ ಅಸಂಖ್ಯಾತ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆದಾಯ ತೆರಿಗೆ ವಿನಾಯಿತಿ ಯೋಜನೆಯು ಮಧ್ಯಮ ವರ್ಗದ 1 ಕೋಟಿ ಜನರಿಗೆ ನಿರಾಳತೆ ನೀಡಲಿದೆ. ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ಕೊಡಲಾಗಿದೆ. ಬಡವರಿಗೆ ಹೆಚ್ಚುವರಿ 2 ಕೋಟಿ ಮನೆಗಳ ನಿರ್ಮಾಣದ ಬಗ್ಗೆ ಘೋಷಿಸಲಾಗಿದೆ ಎಂದು ವಿವರಿಸಿದ್ದಾರೆ.