ರುದ್ರಾಪುರ (ಉತ್ತರಾಖಂಡ):ಧಾರ್ಮಿಕ ಮತಾಂತರದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ ಮೇಲೆ ತನ್ನ ಮಗನನ್ನು ಮತಾಂತರ ಮಾಡಿದ ಆರೋಪ ಹೊರಿಸಿದ್ದಾನೆ. ಅಷ್ಟೇ ಅಲ್ಲ, ಮನೆಯಲ್ಲಿಟ್ಟಿದ್ದ ನಗದು, ಚಿನ್ನಾಭರಣಗಳೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ ಎಂದೂ ದೂರಿದ್ದಾನೆ.
ವ್ಯಕ್ತಿ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ತಲೆಮರೆಸಿಕೊಂಡಿದ್ದು, ಆತನ ಹಿಡಿಯಲು ಜಾಲ ಬೀಸಿದ್ದಾರೆ.
ಪ್ರಕರಣದ ವಿವರ:ರುದ್ರಪುರದ ನಿವಾಸಿಯಾದ ಉತ್ತರಪ್ರದೇಶದ ವ್ಯಕ್ತಿ 10 ವರ್ಷಗಳ ಹಿಂದೆ ಇಸ್ಲಾಂ ಸಮುದಾಯದ ಯುವತಿ ಅವರನ್ನು ವಿವಾಹವಾಗಿದ್ದ. ಇದಕ್ಕೆ ಕುಟುಂಬಸ್ಥರು ಒಪ್ಪದ ಕಾರಣ, ದಂಪತಿ ಪಂಜಾಬ್ಗೆ ವಲಸೆ ಹೋಗಿದ್ದರು. ಬಳಿಕ ಅವರು ರುದ್ರಪುರಕ್ಕೆ ವಾಪಸ್ ಆಗಿದ್ದರು. ಇಬ್ಬರಿಗೆ ಓರ್ವ ಮಗನೂ ಇದ್ದಾನೆ. ಕೆಲ ದಿನಗಳಿಂದ ತನ್ನ ಪತ್ನಿ ಆಕೆಯ ಕುಟುಂಬಸ್ಥರೊಂದಿಗೆ ಸಂಪರ್ಕ ಹೊಂದಿದ್ದಾಳೆ. ಅಲ್ಲದೇ, ಇನ್ನೊಬ್ಬ ವ್ಯಕ್ತಿಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು ಎಂದು ದೂರುದಾರ ವ್ಯಕ್ತಿ ಹೇಳಿದ್ದಾನೆ.
ಈ ಕುರಿತಾಗಿ ನಾವಿಬ್ಬರೂ ಹಲವು ಬಾರಿ ಜಗಳವಾಡಿದ್ದೇವೆ. ತನ್ನ ಸಮುದಾಯದ ಜನರ ಸಂಪರ್ಕ ಬೆಳೆದ ಬಳಿಕ ಆಕೆ ನನ್ನನ್ನು ಇಸ್ಲಾಂಗೆ ಮತಾಂತರವಾಗಲು ಸೂಚಿಸಿದ್ದಳು. ಆದರೆ, ನಾನು ಮೊದಲು ಇದನ್ನು ನಿರಾಕರಿಸಿದೆ. ಈ ವಿಷಯಕ್ಕೂ ಮನಸ್ತಾಪವಾಗಿತ್ತು. ಆದಾಗ್ಯೂ, ಕುಟುಂಬದ ಸಲುವಾಗಿ ಆಕೆಯ ಧರ್ಮವನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದ್ದಾನೆ.