ಕೊಝಿಕ್ಕೋಡ್: ಮಲಯಾಳಂ ಸಿನಿ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ನ್ಯಾ.ಹೇಮಾ ಸಮಿತಿ ನೀಡಿರುವ ವರದಿಯಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಕೇರಳ ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ತಿಳಿಸಿದ್ದಾರೆ. ಅಲ್ಲದೇ, ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರವು ನ್ಯಾಯಾಲಯದ ನಿರ್ದೇಶನಕ್ಕೆ ಕಟ್ಟಿಬದ್ಧವಾಗಿದೆ. ಸದ್ಯ ಈ ಪ್ರಕರಣ ಹೈಕೋರ್ಟ್ ಮುಂದಿದೆ. ರಾಜ್ಯ ಮಾಹಿತಿ ಆಯೋಗ ಬಿಡುಗಡೆ ಮಾಡದಂತೆ ಸೂಚಿಸಿರುವ ಭಾಗವನ್ನು ಮಾತ್ರವೇ ಕೈಬಿಡಲಾಗುವುದು. ಆಯೋಗವೂ ಈ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸೂಚಿಸಿದರೆ, ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸಿದ ಸಮಸ್ಯೆಗಳ ಕುರಿತು ತಿಳಿಸಲು ಸರ್ಕಾರವೂ ಬದ್ಧವಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಒಂದು ಸಮಿತಿಯನ್ನು ರಚಿಸಲಾಗಿದೆ. ವರದಿ ಸಂಬಂಧಿಸಿದಂತೆ ರಾಜ್ಯ ಮಾಹಿತಿ ಆಯೋಗ ನಿರ್ದೇಶನಂತೆ ನಾವು ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸಿದ್ದು, ಇದು ಪಾರದರ್ಶಕವಾಗಿದೆ. ಚಲನಚಿತ್ರ ನೀತಿ ಸೇರಿದಂತೆ ಹೇಮಾ ಸಮಿತಿ ಶಿಫಾರಸನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದರು.