ಕರ್ನಾಟಕ

karnataka

ETV Bharat / bharat

ಇಂದು ಮತ್ತೆ ದೆಹಲಿಯತ್ತ ರೈತರ ನಡಿಗೆ; ಶಂಭು ಗಡಿಯಲ್ಲಿ ಭಾರಿ ಬಿಗಿ ಬಂದೋಬಸ್ತ್​ - FARMERS DELHI MARCH

Farmers Delhi March: ರೈತರು ಈ ಹಿಂದೆ ಎರಡು ಬಾರಿ ದೆಹಲಿಯತ್ತ ಮೆರವಣಿಗೆ ಕೈಗೊಂಡರೂ ಇವು ಯಶಸ್ವಿಯಾಗಿಲ್ಲ. ಶಂಭುಗಡಿ ಬಳಿಯೇ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದರು.

farmers-delhi-march-shambhu-border-jagjit-singh-dallewal-rakesh-tikait-sarwan-singh-pandher
ಶಂಭು ಗಡಿಯಲ್ಲಿ ಪೊಲೀಸರು- ರೈತರು (ANI)

By ETV Bharat Karnataka Team

Published : 5 hours ago

ಅಂಬಲಾ: ಹಲವು ಬೇಡಿಕೆಗೆ ಆಗ್ರಹಿಸಿ ​ ರೈತರು ಇಂದು ಮತ್ತೆ ದೆಹಲಿಯತ್ತ ಮೆರವಣಿಗೆ ಹೊರಟಿದ್ದು, ಅಪರಾಹ್ನ 12ರ ಹೊತ್ತಿಗೆ 101 ರೈತರ ಗುಂಪು ಶುಂಭು ಗಡಿಯತ್ತ ಸಾಗಲಿದೆ. ಈ ಹಿನ್ನೆಲೆಯಲ್ಲಿ ಶಂಭು ಗಡಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಹರಿಯಾಣ ಪೊಲೀಸರು ಬಹು ಹಂತದ ಬ್ಯಾರಿಕೇಡ್​ಗಳನ್ನು ಹಾಕಿದ್ದಾರೆ. ಈ ವೇಳೆ, ಕಳೆದ ಬಾರಿಯಂತೆ ರೈತರು ಮತ್ತು ಪೊಲೀಸ್​ ಸಿಬ್ಬಂದಿ ನಡುವೆ ಘರ್ಷಣೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಎರಡು ಬಾರಿ ವಿಫಲವಾದ ಮೆರವಣಿಗೆ: ರೈತರು ಈ ಹಿಂದೆ ಎರಡು ಬಾರಿ ದೆಹಲಿಯತ್ತ ಮೆರವಣಿಗೆ ಕೈಗೊಂಡರೂ ಇವು ಯಶಸ್ವಿಯಾಗಿಲ್ಲ. ಶಂಭುಗಡಿ ಬಳಿಯೇ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದರು. ಈ ಕುರಿತು ಮಾತನಾಡಿರುವ ರೈತ ನಾಯಕ ಸರ್ವನ್​ ಸಿಂಗ್​ ಪಂಧೇರ್​​, ನಾವು ಸರ್ಕಾರದೊಂದಿಗೆ ಮಾತನಾಡಲು ಸಮಯ ನೀಡಿದ್ದೇವೆ. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಆಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯತ್ತ ಕಾಲ್ನಡಿಗೆ ಮೆರವಣಿಗೆಗೆ ಮುಂದಾಗಿದ್ದೇವೆ. ನಾವು ಶಾಂತಿಯುತ ಹೋರಾಟಕ್ಕೆ ಮುಂದಾದರೂ ಸರ್ಕಾರ ಮತ್ತು ಆಡಳಿತ ನಮ್ಮನ್ನು ದೆಹಲಿಯತ್ತ ಸಾಗಲು ಬಿಡುತ್ತಿಲ್ಲ ಎಂದು ಕಿಡಿಕಾರಿದರು.

ಇಂದು ಮಧ್ಯಾಹ್ನ ಮತ್ತೆ ದೆಹಲಿಯತ್ತ ಪಯಣ: ಮುಂದುವರೆದು ಮಾತನಾಡಿರುವ ರೈತ ಮುಖಂಡ, ನಮ್ಮ ಪ್ರತಿಭಟನೆಯೂ 307ನೇ ದಿನ ತಲುಪಿದ್ದು, 101 ರೈತರು ಇಂದು ದೆಹಲಿಯತ್ತ ಪ್ರಯಾಣಿಸುತ್ತಾರೆ. ಇಡೀ ದೇಶ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದೆ. ಆದರೆ, ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರು ನಮ್ಮ ಜೊತೆ ಮಾತನಾಡದೇ ಅಂತರ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಮೆರವಣಿಗೆ ಸಾಗದಂತೆ ಸರ್ಕಾರ ಕೂಡ ಕಾರ್ಯ ನಿರ್ವಹಿಸುತ್ತಿದೆ. ಆದರೆ, ನಮ್ಮ ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ಗಡಿಯಲ್ಲಿ ಬಿಗಿ ಭದ್ರತೆ: ಹರಿಯಾಣ ಪಂಜಾಬ್ ಮತ್ತು ದೆಹಲಿ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹರಿಯಾಣ ಪೊಲೀಸರು ಅಂಬಲಾದ ಶಂಭು ಗಡಿಯಲ್ಲಿ ಹಲವು ಹಂತದ ಬ್ಯಾರಿಕೇಡ್ ಹಾಕಿದ್ದು​, ಮತ್ತು ಕಾಂಕ್ರಿಟ್​ ಗೋಡೆ ನಿರ್ಮಾಣ ಮಾಡುವ ಮೂಲಕ ರೈತರು ಮುಂದೆ ಸಾಗದಂತೆ ತಡೆಯಬಹುದು.

ಇಂಟರ್​ನೆಟ್​ ಸ್ಥಗಿತ: ದೆಹಲಿಯತ್ತ ರೈತರ ಮೆರವಣಿಗೆ ಸಾಗುವ ಹಿನ್ನೆಲೆಯಲ್ಲಿ ಅಂಬಲಾದಲ್ಲಿ ಇಂಟರ್​ನೆಟ್​ ಸೇವೆಯನ್ನು ಇಂದು ಮಧ್ಯ ರಾತ್ರಿಯಿಂದಲೇ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಡಿಸೆಂಬರ್​ 17ರವರೆಗೆ ಇಂಟರ್​ನೆಟ್​ ಸೇವೆ ಇರುವುದಿಲ್ಲ.

ದತಾಸಿಂಗ್​ ವಾಲಾ ಗಡಿಯಲ್ಲೂ ಭದ್ರತೆ: ಜಿಂದ್ ಮತ್ತು ಪಂಜಾಬ್‌ನ ದತಾಸಿಂಗ್ ವಾಲಾ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದತಾಸಿಂಗ್ ವಾಲಾ ಗಡಿಯನ್ನು ತಾತ್ಕಲಿಕವಾಗಿ ಮುಚ್ಚಲಾಗಿದೆ. ದೆಹಲಿಗೆ ರೈತರ ಮೆರವಣಿಗೆ ಹಿನ್ನೆಲೆಯಲ್ಲಿ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಉಜಾನಾ ಮತ್ತು ನರ್ವಾನಾ ಸಿರ್ಸಾ ಬ್ರಾಂಚ್ ಕಾಲುವೆಗಳಲ್ಲಿ ಕೂಡ ತಡೆ ನಿರ್ಮಾಣ ಮಾಡಲಾಗಿದೆ.

ರೈತರ ಆಮರಣಾಂತ ಉಪವಾಸ: ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ನವೆಂಬರ್ 26 ರಿಂದ ಆಮರಣಾಂತ ಉಪವಾಸ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಕಳೆದ 19 ದಿನದಂದ ಅವರು ಆಹಾರ ತ್ಯಜಿಸಿದ್ದಾರೆ. ಅವರ ಉಪವಾಸಕ್ಕೆ ಭಾರತೀಯ ಕಿಸಾನ್​ ಯೂನಿಯನ್​ (ಟಿಕಾಯತ್​​) ಬೆಂಬಲಿಸಿದೆ. ರಾಕೇಶ್ ಟಿಕಾಯತ್​ ಇಂದು ಖಾನೌರಿ ಗಡಿಯಲ್ಲಿ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಭೇಟಿಯಾಗಲಿದ್ದಾರೆ.

ರೈತರ ಬೇಡಿಕೆಗಳೇನು:

  • ಎಲ್ಲಾ ಬೆಳೆಗಳಿಗೆ ಎಂಎಸ್​ಪಿ ನೀಡಬೇಕು.
  • ಡಾ. ಸ್ವಾಮಿನಾಥನ್​ ಆಯೋಗದಂತೆ ಬೆಳೆಗಳ ದರವನ್ನು ನಿಗದಿಪಡಿಸಬೇಕು.
  • ಡಿಎಪಿ ರಸಗೊಬ್ಬರ ಕೊರತೆ ನೀಗಿಸಬೇಕು.
  • ರೈತರ ಮತ್ತು ರೈತ ಕಾರ್ಮಿಕರ ಸಾಲ ಮನ್ನಾ ಮಾಡಬೇಕು, ಪಿಂಚಣಿ ನೀಡಬೇಕು.
  • 2013ರ ಭೂಸ್ವಾಧೀನ ಕಾಯ್ದೆಯನ್ನು ಮತ್ತೊಮ್ಮೆ ಜಾರಿಗೊಳಿಸಬೇಕು.
  • ಲಖಿಂಪುರ ಖೇರಿ ಘಟನೆಯ ಅಪರಾಧಿಗಳಿಗೆ ಶಿಕ್ಷೆಯಾಗಬೇಕು.
  • ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು.

ಇದರ ಹೊರತಾಗಿ ರೈತ ಚಳವಳಿಯಲ್ಲಿ ಸಾವನ್ನಪ್ಪಿದ ರೈತರಿಗೆ ಸರ್ಕಾರ ಪರಿಹಾರವಾಗಿ ಸರ್ಕಾರಿ ಉದ್ಯೋಗ ನೀಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ತೆಗೆದು ಹಾಕಬೇಕು. ನರೇಗಾದಡಿ ವರ್ಷಕ್ಕೆ 200 ದಿನ ಉದ್ಯೋಗ, 700 ರೂ ದಿನಗೂಲಿ ನೀಡಬೇಕು. ಕಳಪೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟದ ವಿರುದ್ಧ ಕಠಿಣ ಕಾನೂನು ಜಾರಿ ಮಾಡಬೇಕು. ಮೆಣಸಿನಕಾಯಿ, ಅರಿಶಿಣ ಮತ್ತು ಇತರ ಮಸಾಲೆ ವಸ್ತುಗಳಿಗೆ ರಾಷ್ಟ್ರೀಯ ಆಯೋಗ ರಚಿಸಬೇಕು. ಸಂವಿಧಾನದ 5ನೇ ಪಟ್ಟಿಯನ್ನು ಜಾರಿಗೆ ತರುವ ಮೂಲಕ ಆದಿವಾಸಿಗಳ ಭೂಮಿ ಲೂಟಿ ತಡೆಯಬೇಕು.

ಇದನ್ನೂ ಓದಿ:ಡಿ.14ರಂದು ದೆಹಲಿ ಚಲೋ ಹೋರಾಟ ಪುನಾರಂಭ: ಪಂಜಾಬ್ ರೈತರ ಘೋಷಣೆ

ABOUT THE AUTHOR

...view details