ನವದೆಹಲಿ:ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಸರ್ಕಾರದ ಸಚಿವ ರಾಜ್ಕುಮಾರ್ ಆನಂದ್ ತಮ್ಮ ಸಚಿವ ಸ್ಥಾನ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಬುಧವಾರ ರಾಜೀನಾಮೆ ನೀಡಿದರು. ಸರ್ಕಾರ ಮತ್ತು ಪಕ್ಷದಿಂದ ಹೊರಬಂದ ಬೆನ್ನಲ್ಲೇ ಆಪ್ನಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರದಲ್ಲಿ ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿದ್ದ ಆನಂದ್, ಪಟೇಲ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ಉನ್ನತ ನಾಯಕರಲ್ಲಿ ದಲಿತರೇ ಇಲ್ಲ. ದಲಿತ ಶಾಸಕರು, ಸಚಿವರು ಅಥವಾ ಕೌನ್ಸಿಲರ್‌ಗಳಿಗೆ ಯಾವುದೇ ಗೌರವವನ್ನೂ ನೀಡಿಲ್ಲ ಎಂದು ದೂರಿದರು.
''ನಮ್ಮಲ್ಲಿ 13 ರಾಜ್ಯಸಭಾ ಸಂಸದರಿದ್ದಾರೆ. ಆದರೆ, ಅವರಲ್ಲಿ ಯಾರೂ ಕೂಡ ದಲಿತರು, ಮಹಿಳೆಯರು ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದವರಿಲ್ಲ. ಈ ಪಕ್ಷದಲ್ಲಿ ದಲಿತ ಶಾಸಕರು, ಪಾಲಿಕೆ ಸದಸ್ಯರು, ಸಚಿವರಿಗೆ ಸೂಕ್ತ ಗೌರವವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ದಲಿತರೆಲ್ಲರೂ ಮೋಸ ಹೋದಂತೆ ಭಾಸವಾಗುತ್ತಿದೆ. ಇದೆಲ್ಲದರಿಂದ ನಾನು ಈ ಪಕ್ಷದಲ್ಲಿ ಉಳಿಯುವುದು ಕಷ್ಟವಾಗಿದೆ'' ಎಂದು ಆನಂದ್ ತಿಳಿಸಿದರು.
''ಡಾ.ಭೀಮ್ ರಾವ್ ಅಂಬೇಡ್ಕರ್ ಅವರಿಂದಾಗಿ ನಾನು ರಾಜಕಾರಣಿಯಾಗಿದ್ದೇನೆ. ದಲಿತರಿಗೆ ಪ್ರಾತಿನಿಧ್ಯ ನೀಡಲು ಹಿಂದೆ ಸರಿಯುವ ಯಾವುದೇ ಪಕ್ಷವಾದರೂ, ನಾನು ಆ ಪಕ್ಷದಲ್ಲಿ ಉಳಿಯಲು ಬಯಸುವುದಿಲ್ಲ. ಆಮ್ ಆದ್ಮಿ ಪಕ್ಷ ಹುಟ್ಟಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡಲು. ಆದರೆ, ಇಂದು ಅದೇ ಪಕ್ಷ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ. ನನಗೆ ಸಚಿವ ಸ್ಥಾನನಾಗಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಈ ಭ್ರಷ್ಟಾಚಾರದೊಂದಿಗೆ ನನ್ನ ಹೆಸರನ್ನು ಜೋಡಿಸಲು ಸಾಧ್ಯವಿಲ್ಲ. ನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ'' ಎಂದು ಹೇಳಿದರು.
ಸಚಿವ ಆನಂದ್ ರಾಜೀನಾಮೆ ಕುರಿತು ಆಪ್ ನಾಯಕ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ''ಬಿಜೆಪಿ ನಮ್ಮ ಸಚಿವರು ಮತ್ತು ಶಾಸಕರನ್ನು ಇಬ್ಭಾಗ ಮಾಡಲು ಇಡಿ, ಸಿಬಿಐ ಅನ್ನು ಬಳಸುತ್ತಿದೆ. ಇದು ಆಪ್ ಸಚಿವರು ಮತ್ತು ಶಾಸಕರಿಗೆ ಒಂದು ಪರೀಕ್ಷೆ. ಕೇಜ್ರಿವಾಲ್ ಅವರ ಬಂಧನವು ಆಪ್ ಮುಗಿಸುವ ಗುರಿ ಹೊಂದಿದೆ ಎಂದು ನಾವು ಈಗಾಗಲೇ ಹೇಳಿದ್ದೇವೆ. ಆನಂದ್ ಅವರನ್ನು ಈ ಹಿಂದೆ ಬಿಜೆಪಿ ಭ್ರಷ್ಟ ಎಂದು ಕರೆದಿತ್ತು. ಆದರೆ, ಈಗ ಅವರು ಅದೇ ಪಕ್ಷಕ್ಕೆ ಸೇರುತ್ತಾರೆ'' ಎಂದು ಸಿಂಗ್ ಕುಟುಕಿದರು.
ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ. ಕಳೆದ 20 ದಿನಗಳಿಂದ ಜೈಲಿನಲ್ಲಿದ್ದಾರೆ. ಇದಕ್ಕೂ ಮುನ್ನ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಅವರನ್ನೂ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಬಂಧಿಸಿ, ಜೈಲಿನಲ್ಲಿರಿಸಿವೆ. ಇದೇ ಪ್ರಕರಣದಲ್ಲಿ ಸಂಜಯ್ ಸಿಂಗ್ ಕೂಡ ಜೈಲಿಗೆ ಹೋಗಿದ್ದರು. ಕೆಲ ದಿನಗಳಿಂದ ಸಂಜಯ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಕೇಜ್ರಿವಾಲ್, ಸಿಸೋಡಿಯಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್: ಬಂಧನ ಕಾನೂನು ಬದ್ಧ ಎಂದ ನ್ಯಾಯಾಲಯ