ಇಂದೋರ್(ಮಧ್ಯಪ್ರದೇಶ): ಮದುವೆಗಳಲ್ಲಿ ಕುದುರೆ ಮೇಲೆ ವರ ಬರುವುದನ್ನು ನೋಡಿದ್ದೇವೆ. ಕುದುರೆಗಳನ್ನ ಕುಣಿಸೋದನ್ನು ಕಂಡಿದ್ದೇವೆ. ಆದರೆ ಈಗ ಕುದುರೆಗಳನ್ನೇ ಒಂಟೆಗಳು ಮೀರಿಸಿದ್ದು ದುಬಾರಿಯಾಗಿದೆ. ಒಂಟೆಗಳು ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುವುದನ್ನು ಕಲಿತಿದ್ದು, ಇವುಗಳಿಗೆ ಬೇಡಿಕೆ ಈಗ ಜಾಸ್ತಿಯಾಗುತ್ತಾ ಸಾಗಿದೆ.
ನೃತ್ಯ ಮಾಡುವ ಒಂಟೆ ಬೆಲೆ 7 ಲಕ್ಷ ರೂ. : ಒಂಟೆ ನೃತ್ಯಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಧ್ಯಪ್ರದೇಶದಲ್ಲಿ ಒಂಟೆಗಳಿಗೆ ವಿವಿಧ ರೀತಿಯ ತರಬೇತಿ ನೀಡುತ್ತಿದ್ದು, ನೃತ್ಯವನ್ನು ಕಲಿಸಲಾಗುತ್ತಿದೆ. ಸದ್ಯ ನೃತ್ಯ ಮಾಡುವ ಒಂಟೆಗಳ ಬೆಲೆ 50,000 ರಿಂದ 7 ಲಕ್ಷ ರೂಪಾಯಿಗಳಿಗೆ ಏರಿದೆ.
ಅವನತಿಯತ್ತ ಒಂಟೆ ಸಂತತಿ?: ಮರುಭೂಮಿಯ ಹಡಗುಗಳು ಎಂದು ಕರೆಯಲ್ಪಡುವ ಒಂಟೆಗಳು ಶತಮಾನಗಳಿಂದ ಕಠಿಣ ಮರುಭೂಮಿಯಲ್ಲಿ ಸಾರಿಗೆಗೆ ಇರುವ ಏಕೈಕ ಸಾಧನಗಳಾಗಿವೆ. ಮುಂದುವರೆದ ಜಗತ್ತಲ್ಲಿ ಈಗ ವಿವಿಧ ರೀತಿಯ ವಾಹನಗಳನ್ನು ಬಳಸಲಾಗುತ್ತಿದೆ. ಹೀಗೆ ಮರುಭೂಮಿಯಲ್ಲಿ ಪ್ರಯಾಣಿಸಲು ಇತರ ವಿಧಾನಗಳ ಅಭಿವೃದ್ಧಿಯಿಂದಾಗಿ ಒಂಟೆಗಳ ಬಳಕೆ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಈಗ ಒಂಟೆಗಳನ್ನು ವಿವಿಧ ಕೆಲಸಗಳಲ್ಲಿ ಬಳಸಲು ತರಬೇತಿ ನೀಡಲಾಗುತ್ತಿದೆ.
1 ವರ್ಷದ ತರಬೇತಿಯಲ್ಲಿ 5 ವಿಧದ ನೃತ್ಯ: ಇನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೇ ದೇಶದ ಇತರ ರಾಜ್ಯಗಳಲ್ಲಿಯೂ ನೃತ್ಯ ಮಾಡುವ ಒಂಟೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಒಂಟೆಗಳಿಗೂ ವಿವಿಧ ರೀತಿಯ ನೃತ್ಯಗಳನ್ನು ಕಲಿಸಲಾಗುತ್ತಿದೆ.
ಡ್ಯಾನ್ಸ್ನ ವಿಧಗಳು ಹೀಗಿದೆ:ಪ್ರಸ್ತುತ, ಇಂದೋರ್‌ನ ಮಹೌ ಮತ್ತು ದೇವಾಸ್‌ನ ರಸೂಲ್‌ಪುರ ಬೈಪಾಸ್ನಲ್ಲಿರುವ ಒಂದೇ ಸ್ಥಳದಲ್ಲಿ ಅನೇಕ ಒಂಟೆಗಳಿಗೆ ವಿವಿಧ ರೀತಿಯ ನೃತ್ಯಗಳನ್ನು ಕಲಿಸಲಾಗುತ್ತಿದೆ. ಇವುಗಳಲ್ಲಿ,
- ಶೇರ್ ಪಟಾಕ್ ನೃತ್ಯ (ಸಿಂಹದಂತೆ ಎರಡು ಕಾಲುಗಳನ್ನು ಮುಂದಕ್ಕೆ ಇರಿಸಿ ಕುಳಿತುಕೊಳ್ಳುವುದು)
- ನಾಚ್ ಕೆ ಪರ್ ನೃತ್ಯ (ಪಾದಗಳಿಗೆ ಗೆಜ್ಜೆಗಳನ್ನು ಕಟ್ಟಿ ಮುಂಭಾಗದ ಕಾಲುಗಳಿಂದ ನೃತ್ಯ ಮಾಡುವುದು)
- ಚೌತಾಲಾ ನೃತ್ಯ (ನಾಲ್ಕು ಕಾಲುಗಳನ್ನು ಒಟ್ಟಿಗೆ ಸೇರಿಸಿ ನೃತ್ಯ ಮಾಡುವುದು)
- ಜಂಪಿಂಗ್ ನೃತ್ಯ (ಕುದುರೆಯಂತೆ ಮುಂಭಾಗದ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ಎರಡು ಕಾಲುಗಳ ಮೇಲೆ ನಿಂತು ನೃತ್ಯ ಮಾಡುವುದು)
- ನೀಚಿ ನಾರ್ (ಕುತ್ತಿಗೆಯನ್ನು ಕೆಳಗೆ ಇರಿಸಿ ನೃತ್ಯ ಮಾಡುವುದು) ಮತ್ತು ಇತ್ಯಾದಿಗಳು ಪ್ರಮುಖವಾದವುಗಳಾಗಿವೆ.
ಒಂಟೆಯ ನೃತ್ಯ ತರಬೇತುದಾರ ಫಿರೋಜ್ ಅಲಿ ಎನ್ನುವವರು ಈ ಬಗ್ಗೆ ಮಾತನಾಡಿದ್ದಾರೆ. "ಒಂಟೆಗಳಿಗೆ ಬಾಲ್ಯದಿಂದಲೇ ನೃತ್ಯ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ 2 ರಿಂದ 4 ವರ್ಷ ವಯಸ್ಸಿನ ಒಂಟೆಗಳು ಬೇಗನೆ ನೃತ್ಯವನ್ನು ಕಲಿಯುತ್ತವೆ. ನೃತ್ಯವನ್ನು ಕಲಿಯಲು, ಮೂಗಿನಲ್ಲಿ ಕಡಿವಾಣ ಹಾಕುವ ಮೂಲಕ ಕುದುರೆಗಳಂತೆ ಅವುಗಳನ್ನು ನಿಯಂತ್ರಿಸಿದ ನಂತರ, ಹಗ್ಗದ ಸನ್ನೆಗಳ ಸಹಾಯದಿಂದ ವಿವಿಧ ಹಂತಗಳನ್ನು ಕಲಿಸಲಾಗುತ್ತದೆ".