ಲಖನೌ (ಉತ್ತರಪ್ರದೇಶ):ಅಯೋಧ್ಯೆ, ಕಾಶಿಯ ಬಳಿಕ ಮಥುರಾದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಶ್ರೀಕೃಷ್ಣನ ದೇವಸ್ಥಾನದ ಜಾಗವನ್ನು ನೀಡಲು ಕೋರಲಾಗಿದೆ. ಅಯೋಧ್ಯೆ, ಕಾಶಿ, ಮಥುರಾ ಕ್ಷೇತ್ರ ಹಿಂದೂಗಳಿಗೆ ಪವಿತ್ರವಾದವುಗಳು ಎಂದು ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಸಿಎಂ, ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥನಲ್ಲಿ ಕೂಡ ಪೂಜೆ ಆರಂಭವಾಗಿದೆ. ಇದೆಲ್ಲವೂ ಆದ ಮೇಲೆ ಮಥುರಾದಲ್ಲಿನ ಶ್ರೀಕೃಷ್ಣ ಸುಮ್ಮನೆ ಕೂರುತ್ತಾನೆಯೇ ಎಂದು ಪ್ರಶ್ನಿಸುವ ಮೂಲಕ, ಮಸೀದಿ ಇರುವ ಜಾಗದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
2019 ರಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲಾಗಿದೆ. ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಪ್ರಕರಣದಲ್ಲಿ ಮೊದಲ ಜಯ ಸಾಧಿಸಲಾಗಿದೆ. ಇದೀಗ ಮಥುರಾದ ಕೃಷ್ಣನ ಮಂದಿರವನ್ನು ಅಭಿವೃದ್ಧಿಪಡಿಸಬೇಕಿದೆ ಎಂದಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ಅಯೋಧ್ಯೆ, ಕಾಶಿ, ಮಥುರಾ ನಮ್ಮ ಪವಿತ್ರ ಕ್ಷೇತ್ರಗಳು. ಈ ಮೂರನ್ನು ಬಿಟ್ಟುಕೊಡಲು ಕೇಳಿದ್ದೇವೆ. ಇವು ಸಾಮಾನ್ಯ ಸ್ಥಳಗಳಲ್ಲ, ದೇವರ ನಾಡು. ಇಲ್ಲಿನ ಜಾಗವನ್ನು ಬಿಟ್ಟುಕೊಡಲು ಕೋರಲಾಗಿದೆ ಎಂದರು.
ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆ:ಮೂಲ ಕಾಶಿ ವಿಶ್ವನಾಥ ದೇವಸ್ಥಾನ ಎಂದು ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಾಣಸಿ ಕೋರ್ಟ್ ಅವಕಾಶ ನೀಡಿದೆ. ಅಲ್ಲಿ ಪೂಜೆಯನ್ನು ಸಲ್ಲಿಸಲಾಗಿದೆ. ಇದನ್ನು ತಡೆಯಬೇಕು ಎಂದು ಕೋರಿ ಮುಸ್ಲಿಂ ಪಕ್ಷಗಾರರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಕೋರ್ಟ್ ನಿರಾಕರಿಸಿದೆ.
1993 ರವರೆಗೆ ಮಸೀದಿಯ ನೆಲಮಾಳಿಗೆಯಲ್ಲಿ ತಮ್ಮ ಪೂರ್ವಜರಯ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಬಂದ ಸಮಾಜವಾದಿ ಸರ್ಕಾರ ಇದನ್ನು ತಡೆದಿತ್ತು. ಮತ್ತೆ ಅಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಕೋರಿ ವ್ಯಾಸ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪೂರಕ ಪುರಾವೆಗಳನ್ನೂ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟ್, ಪೂಜೆಗೆ ಅವಕಾಶ ಮಾಡಿಕೊಟ್ಟಿದೆ.
ಮಥುರಾ ಕೆಡವಿದ್ದು ಔರಂಗಜೇಬ್:ಮಥುರಾದ ಶ್ರೀಕೃಷ್ಣ ದೇಗುಲವನ್ನು ಒಡೆಸಿದ್ದು, ಮೊಗಲ್ ಅರಸ ಔರಂಗಜೇಬ್ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಈ ಬಗ್ಗೆ ಕೋರಲಾಗಿದ್ದ ಆರ್ಟಿಐ ಅರ್ಜಿಗೆ ಉತ್ತರಿಸಿರುವ ಎಎಸ್ಐ, ಔರಂಗಜೇಬನ ಆಳ್ವಿಕೆಯಲ್ಲಿ ದೇವಾಲಯವನ್ನು ಕೆಡವಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದೆ.