ವಾರಾಣಸಿ, ಉತ್ತರಪ್ರದೇಶ: ಭಸ್ಮ ಮತ್ತು ತಿಲಕವನ್ನು ಧರಿಸಿದ ನಾಗ ಸಂತರು ಕುಣಿದು ಕುಪ್ಪಳಿಸುತ್ತಾ ಮುಂದೆ ಸಾಗುತ್ತಿದ್ದರು. ಅತ್ತ ವಿದೇಶಿ ಭಕ್ತರಲ್ಲಿ ಮದುವೆ ಕಣ್ತುಂಬಿಕೊಳ್ಳುವ ತವಕ. ಈ ನಡುವೆ ವರನಂತೆ ಅಲಂಕೃತಗೊಂಡ ಕಾಶಿ ವಿಶ್ವನಾಥ, ರಥವೇರಿ ಸಾಗುತ್ತಿದ್ದರೆ, ಅದರ ಹಿಂದೆಯೇ ಹರ ಹರ ಮಹಾದೇವ್ ಎಂಬ ಮಂತ್ರ ಘೋಷಗಳ ಅನುರುಣನ.
ಯೆಸ್ ಇಂತಹ ದೃಶ್ಯಗಳು ಕಂಡು ಬಂದಿದ್ದು ಕಾಶಿಯ ಶಿವನ ದೇಗುಲದಲ್ಲಿ. ಮಹಾಶಿವರಾತ್ರಿಯಂದು ಇಲ್ಲಿ ಕಾಶಿ ವಿಶ್ವನಾಥ ಹಾಗೂ ಪಾರ್ವತಿಯ ವಿವಾಹ ನಡೆಯುವುದು ಸಂಪ್ರದಾಯ. ಶಿವರಾತ್ರಿಯ ಈ ದಿನದಂತೆ ಶಿವ- ಪಾರ್ವತಿಯರ ಸಂಗಮ ಆಗಿತ್ತು ಎನ್ನುವುದು ನಂಬಿಕೆ. ಈ ಹಿನ್ನೆಲೆಯಲ್ಲಿ ಈ ಸಂಪ್ರದಾಯವನ್ನು ತಲತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಈ ವಿವಾಹದ ಹಿನ್ನೆಲೆಯಲ್ಲಿ ವಿಶ್ವನಾಥ್ ನನ್ನು ರಾಜನಂತೆ ಅಲಂಕರಿಸಲಾಗಿತ್ತು. ವರನ ವೇಷದಲ್ಲಿ ಶಿವ ಕಂಗೊಳಿಸುತ್ತಿದ್ದರೆ, ಮಥುರಾದಿಂದ ತಂದ ವಿಶೇಷ ಕೆಂಪು ಲೆಹೆಂಗಾದಿಂದ ಪಾರ್ವತಿಯನ್ನು ಅಲಂಕರಿಸಲಾಗಿತ್ತು.
ಹರಿದು ಬಂದ ಭಕ್ತ ಸಾಗರ: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ವಿಶ್ವನಾಥನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಆಶೀರ್ವಾದ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ ದಂಡೇ ದೇಗುಲಕ್ಕೆ ಆಗಮಿಸಿತ್ತು . 5.ಕಿಮೀ ಉದ್ದದ ಸರತಿ ಸಾಲಿನಲ್ಲಿ ಬೆಳಗಿನಿಂದ ಮಧ್ಯರಾತ್ರಿವರೆಗೆ ಸುಮಾರು 9,07,435 ಭಕ್ತರು ದರ್ಶನ ಪಡೆದು, ಶಿವನ ಕೃಪೆಗೆ ಪಾತ್ರರಾದರು . ಬೆಳಗ್ಗೆ ವಿವಿಧ ಅಖಾಡಗಳಿಂದ ನಾಗಾ ಯತಿಗಳು ಮೆರವಣಿಗೆ ಮೂಲಕ ಕಾಶಿ ವಿಶ್ವನಾಥನ ಅನುಗ್ರಹಕ್ಕೆ ಪಾತ್ರರಾದರು.