ನವದೆಹಲಿ:ಭಾರತೀಯ ಸೇನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಸೇನೆಯ ದೊಡ್ಡ ಹುದ್ದೆಗಳನ್ನು ನಾರಿಯರು ಅಲಂಕರಿಸುತ್ತಿದ್ದಾರೆ. ಟ್ರ್ಯಾಪ್ ಶೂಟಿಂಗ್ ಚಾಂಪಿಯನ್ ಆಗಿರುವ ಹವಾಲ್ದಾರ್ ಪ್ರೀತಿ ರಜಕ್ ಅವರು ಭಾನುವಾರ ಸುಬೇದಾರ್ ಆಗಿ ಬಡ್ತಿ ಪಡೆದಿದ್ದಾರೆ. ಭಾರತೀಯ ಸೇನೆಯಲ್ಲಿ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಅಭಿದಾನಕ್ಕೂ ಪಾತ್ರರಾದರು.
ಸುಬೇದಾರ್ ಪ್ರೀತಿ ಅವರು 2022 ರ ಡಿಸೆಂಬರ್ಲ್ಲಿ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ತುಕಡಿ ಮೂಲಕ ಸೈನ್ಯಕ್ಕೆ ಸೇರಿದ್ದರು. ಹವಾಲ್ದಾರ್ ಆಗಿದ್ದ ಅವರು ಇದೀಗ ಸುಬೇದಾರ್ ಹುದ್ದೆಗೇರಿದ್ದಾರೆ. ಭಾರತೀಯ ಸೇನೆ ಹಾಗೂ ದೇಶದ ಮಹಿಳೆಯರಿಗೆ ಇದು ಹೆಮ್ಮೆಯ ಕ್ಷಣ ಎಂದು ಸೇನೆ ತಿಳಿಸಿದೆ.
ಪ್ರೀತಿ ರಜಕ್ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿದ್ದಾರೆ. ಅವರ ಸಾಧನೆಯು ನಾರಿ ಶಕ್ತಿಯ ಅಸಾಮಾನ್ಯ ಪ್ರದರ್ಶನವಾಗಿದೆ. ಅವರ ಮಹಾನ್ ಸಾಧನೆಯು ಯುವತಿಯರು ಭಾರತೀಯ ಸೇನೆಗೆ ಸೇರಲು ಪ್ರೇರೇಪಿಸುತ್ತದೆ. ವೃತ್ತಿಪರ ಶೂಟಿಂಗ್‌ನಲ್ಲೂ ಅವರ ಚಾಕಚಕ್ಯತೆ ಮುಂದುವರಿಯಲಿದೆ ಎಂದು ಸೇನೆ ಹೇಳಿದೆ.
ಯಾರು ಈ ಪ್ರೀತಿ ರಜಕ್?:ವೃತ್ತಿಪರ ಶೂಟರ್ ಆಗಿರುವ ಪ್ರೀತಿ ರಜಕ್ ಅವರು, ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಟ್ರ್ಯಾಪ್ ಮಹಿಳಾ ತಂಡವನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಬಳಿಕ ಅವರು ಹವಾಲ್ದಾರ್ ಆಗಿ ಸೈನ್ಯಕ್ಕೆ ಸೇರಿದ್ದರು. ಶೂಟಿಂಗ್ ವಿಭಾಗದಲ್ಲಿ ಈ ಹುದ್ದೆ ಪಡೆದ ಮೊದಲ ಕ್ರೀಡಾಪಟು ಎಂಬ ಅಭಿದಾನಕ್ಕೂ ಅವರ ಪಾತ್ರರಾಗಿದ್ದರು. ಇದೀಗ ಅಸಾಧಾರಣ ಪ್ರದರ್ಶನದಿಂದಾಗಿ ಸುಬೇದಾರ್ ಆಗಿ ಬಡ್ತಿ ಪಡೆದಿದ್ದಾರೆ.
ಸುಬೇದಾರ್ ರಜಕ್ ಅವರು ಟ್ರ್ಯಾಪ್ ವುಮೆನ್ ಶೂಟಿಂಗ್ ವಿಭಾಗದಲ್ಲಿ ಭಾರತದ ಆರನೇ ಶ್ರೇಯಾಂಕಿತೆ ಆಗಿದ್ದಾರೆ. ಈ ವರ್ಷ ನಡೆಯುವ ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಭಾಗಿಯಾಗಲು ಆರ್ಮಿ ಮಾರ್ಕ್ಸ್‌ಮನ್‌ಶಿಪ್ ಯುನಿಟ್ (ಎಎಂಯು) ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದರೊಂದಿಗೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಮೇಜರ್ ಮತ್ತು ಗೌರವ ಲೆಫ್ಟಿನೆಂಟ್ ಜಿತು ರೈ ಅವರನ್ನು ರಾಷ್ಟ್ರಕ್ಕೆ ನೀಡದ ಸೇವೆಯನ್ನು ಗುರುತಿಸಿ ಸುಬೇದಾರ್ ಮೇಜರ್ ಮತ್ತು ಗೌರವ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ.
ಭಾರತೀಯ ಸೇನೆಯಲ್ಲಿನ ವೈದ್ಯಕೀಯ ನಿಯಮಗಳು ಮಹಿಳೆಯರ ವಿರುದ್ಧವಾಗಿವೆ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಅಸಮಾಧಾನಪಟ್ಟಿತ್ತು. ಈ ಬಗ್ಗೆ 80 ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಕೋರ್ಟ್, ನಮ್ಮ ಸಮಾಜದ ರಚನೆಯು ಪುರುಷರಿಂದ ಪುರುಷರಿಗಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬೇಸರಿಸಿತ್ತು.
ಇದನ್ನೂ ಓದಿ:ವಿಶ್ವದಲ್ಲಿ ಅತ್ಯಂತ ಬಲಿಷ್ಠ ಸೇನಾಪಡೆ ಹೊಂದಿರುವ ದೇಶ ಯಾವುದು? ಭಾರತ, ಚೀನಾ ಸ್ಥಾನ ಹೀಗಿದೆ