ಯೋಗದ ಮಹತ್ವ ಜಗತ್ತಿಗೆ ಅರಿವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ವಿಜಯನಗರ: ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ "ಮಾನವತೆಗಾಗಿ ಯೋಗ"ಎಂಬ ಘೋಷ ವಾಕ್ಯದೊಂದಿಗೆ ವಿಶ್ವಪಾರಂಪರಿಕ ತಾಣ ಹಂಪಿಯ ಬಸವಣ್ಣ ಮಂಟಪದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಶ್ವಸಂಸ್ಥೆ ಸೇರಿ 79 ದೇಶಗಳಲ್ಲಿ ಇಂದು ಯೋಗ ದಿನ ಆಚರಿಸಲಾಗುತ್ತಿದೆ. ದೇಶದ ಮೇಲೆ ಸಾವಿರ ವರ್ಷಗಳಿಂದ ವಿದೇಶಿಗರ ಅಕ್ರಮಣದ ನಂತರವೂ ದೇಶದ ಸಂಸ್ಕೃತಿ ಗಟ್ಟಿ ಉಳಿಯಲು ನಮ್ಮ ಸಂಸ್ಕೃತಿ ಕಾರಣ. ಅದರಲ್ಲಿ ಯೋಗ ಪ್ರಮುಖವಾಗಿದೆ. ದೇಶದ ಯೋಗ ಪದ್ಧತಿಯ ಮಹತ್ವ ಜಗತ್ತಿಗೆ ಅರ್ಥವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ವಿಶ್ವವೇ ಇಂದು ಅಂತಾರಾಷ್ಟ್ರೀಯ ಯೋಗ ಆಚರಣೆ ಮಾಡುತ್ತಿದೆ ಎಂದರು. ಸಚಿವ ಆನಂದ್ ಸಿಂಗ್, ಪದ್ಮಶ್ರೀ ಮಂಜಮ್ಮ ಜೋಗತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಮಾಡಿದರು.