ಮರಣೋತ್ತರ ಪರೀಕ್ಷೆ ಮುಕ್ತಾಯ.. ಎಲ್ಲೆಡೆ ಬಿಗಿ ಬಂದೋಬಸ್ತ್, ಗುಲಾಬ್‌ಚಂದ್ ಕಟಾರಿ ಸಂತಾಪ! - ಉದಯಪುರನ ಎಂಬಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ರಾಜಸ್ಥಾನದ ಉದಯಪುರದಲ್ಲಿ ಮಂಗಳವಾರ ಹಾಡಹಗಲೇ ನಡೆದ ವ್ಯಕ್ತಿಯ ಬರ್ಬರ ಕೊಲೆಯಿಂದಾಗಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ, 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಇಡೀ ರಾಜ್ಯದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಬಂದ್ ಮಾಡಲಾಗಿದೆ. ಅಲ್ಲದೆ, ಮುಂದಿನ 30 ದಿನಗಳ ಕಾಲ ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರೊಂದಿಗೆ ಮುಂದಿನ ಆದೇಶದವರೆಗೆ ಪೊಲೀಸ್ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ರೀತಿಯ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈಗ ಕೊಲೆಯಲ್ಲಿ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಎಂಬಿ ಆಸ್ಪತ್ರೆಯಲ್ಲಿ ನಡೆಯಿತು, ಆಸ್ಪತ್ರೆ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತಸಲಾಗಿದ್ದು, ಅವರ ಸ್ವಂತ ಊರಿಗೆ ತಲುಪಿದೆ. ಎನ್‌ಐಎ ತಂಡ ಹಾಗೂ ಎಸ್‌ಐಟಿ ನಗರದಲ್ಲಿ ಬೀಡು ಬಿಟ್ಟಿದ್ದು, ಹಂತಕರು ಪೊಲೀಸರ ವಶದಲ್ಲಿದ್ದಾರೆ. ವಿರೋಧ ಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಎಂಬಿ ಆಸ್ಪತ್ರೆಯ ಹೊರಗೆ ಹಾಜರಾಗಿದ್ದು, ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.