ಹೊಂಡಕ್ಕೆ ಬಿದ್ದ 14 ಆನೆಗಳ ಹಿಂಡಿನಲ್ಲಿದ್ದ ಮರಿ ಆನೆ: ರಕ್ಷಣೆ ನಂತರ ತನ್ನ ಜೊತೆಯಲ್ಲಿ ಕರೆದೊಯ್ದ ತಾಯಿ ಆನೆ.. ವಿಡಿಯೋ
ಕೊರಬಾ (ಛತ್ತೀಸ್ಗಢ): ಜಿಲ್ಲೆಯ ಕಟಘೋರಾ ಅರಣ್ಯ ವಿಭಾಗದಲ್ಲಿ ಗುರುವಾರ ರಾತ್ರಿ 14 ಆನೆಗಳ ಹಿಂಡಿನಲ್ಲಿ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಬದಿಯ ಹೊಂಡಕ್ಕೆ ಬಂದಿದ್ದ ಮರಿ ಮನೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಹೊಂಡಕ್ಕೆ ಬಿದ್ದ ತಕ್ಷಣವೇ ಅದರ ತಾಯಿ ಕೂಗಲು ಆರಂಭಿಸಿತ್ತು. ಮೊದಲಿಗೆ ಆನೆಗಳೇ ಮರಿ ಆನೆಯನ್ನು ಹೊಂಡದಿಂದ ಹೊರತರಲು ಪ್ರಯತ್ನಿಸಿದ್ದವು. ಆದರೆ, ಹೊಂಡ ಆಳವಾಗಿದ್ದ ಕಾರಣ ಮತ್ತು ಪಾಚಿ ಗಟ್ಟಿದ್ದರಿಂದ ಮರಿ ಆನೆ ಹೊರಬರಲು ಸಾಧ್ಯವಾಗಲಿಲ್ಲ. ಇದರಿಂದ ಆನೆಗಳ ಹಿಂಡು ಮತ್ತೆ ಕೂಗಲಾರಂಭಿಸಿದವು. ಆಗ ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಬಂದರು. ಆದರೆ, ಆನೆಗಳ ಹಿಂಡು ಮರಿ ಆನೆಯ ಸುತ್ತಲೇ ಸುತ್ತಿದ್ದವು. ಈ ವೇಳೆ ಸ್ಥಳೀಯರ ಸಹಾಯದಿಂದ ಅಧಿಕಾರಿಗಳು ಅವುಗಳನ್ನು ಬೆದರಿಸಲು ಆರಂಭಿಸಿದರು. ಹೀಗಾಗಿ ಸ್ವಲ್ಪ ಹೊತ್ತಿನ ನಂತರ ಆ ಆನೆಗಳು ಕಾಡಿತ್ತ ತೆರಳಿದವು. ಬಳಿಕ ಜೆಸಿಬಿ ಸಹಾಯದಿಂದ ಮರಿ ಆನೆಯನ್ನು ಅತ್ಯಂತ ಎಚ್ಚರಿಕೆಯಿಂದ ಹೊಂಡದಿಂದ ಅಧಿಕಾರಿಗಳು ರಕ್ಷಣೆ ಮಾಡಿದರು. ಮರಿ ಆನೆ ಹೊರ ಬಂದ ತಕ್ಷಣ ರಸ್ತೆಗೆ ಬಂದ ತಾಯಿ ಆನೆ ತನ್ನ ಜೊತೆಯಲ್ಲಿ ಕರೆದುಕೊಂಡು ಕಾಡಿನತ್ತ ಹೊರಟು ಹೋಯಿತು.