ಬೀದಿ ನಾಯಿ ಬೇಟೆಯಾಡಿದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ: ವಿಡಿಯೋ - ಬೀದಿ ನಾಯಿಯನ್ನು ಬೇಟೆಯಾಡಿದ ಹೆಬ್ಬಾವು
ಕಾರವಾರ: ಬೀದಿ ನಾಯಿಯನ್ನು ಬೇಟೆಯಾಡಿ ಪೊದೆಯಲ್ಲಿ ಅವಿತುಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಘಟನೆ ಕಾರವಾರದ ತೇಲಂಗ ರಸ್ತೆಯಲ್ಲಿ ನಡೆದಿದೆ. ಬರೋಬ್ಬರಿ 12 ಅಡಿ ಉದ್ದದ ಹೆಬ್ಬಾವು ಚಂದ್ರದೇವಿವಾಡದ ಚಂದ್ರದೇವಿ ದೇವಸ್ಥಾನದ ಬಳಿ ಬೀದಿ ನಾಯಿಯನ್ನು ಬೇಟೆಯಾಡಿ ಅರ್ಧ ನುಂಗಿತ್ತು. ಇದರಿಂದಾಗಿ ಸ್ಥಳೀಯರು, ದೇವಸ್ಥಾನಕ್ಕೆ ಬರುವ ಭಕ್ತರು ಕಂಗಾಲಾಗಿದ್ದರು. ತಕ್ಷಣ ಅರಣ್ಯ ಇಲಾಖೆಯ ಉರಗತಜ್ಞ ಗೋಪಾಲ ನಾಯ್ಕ ಹಾಗೂ ಉರಗ ಸಂರಕ್ಷಕ ನಿತಿನ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅವರು ನಾಯಿ ಜೀವ ಬಿಟ್ಟಿದ್ದರಿಂದ ಬೇಟೆಯನ್ನು ಬಿಡಿಸುವುದು ಸರಿಯಲ್ಲವೆಂದು ಸುಮ್ಮನಾಗಿದ್ದರು. ಆದರೆ ಸ್ಥಳೀಯರ ಒತ್ತಾಯದ ಮೇರೆಗೆ ನಾಯಿಯನ್ನು ಹೆಬ್ಬಾವಿನ ಬಾಯಿಯಿಂದ ಬಿಡಿಸಿ, ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ಸುಮಾರು 45 ಕೆ.ಜಿ ತೂಕವ ಇದ್ದ ಈ ಹೆಬ್ಬಾವನ್ನು ನೋಡಲು ನೂರಾರು ಜನರು ನೆರೆದಿದ್ದರು.