ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗ ಆಡಳಿತ ಮಂಡಳಿ ಸಭೆ; ತೆಲಂಗಾಣ ಸಿಎಂ ಗೈರು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ 7ನೇ ಆಡಳಿತ ಮಂಡಳಿ ಸಭೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ನಡೆಯಿತು. 2019 ರ ನಂತರ ಇದೇ ಮೊದಲ ಬಾರಿಗೆ ಈ ಸಭೆ ನಡೆದಿದೆ. ಬೆಳೆ ವೈವಿಧ್ಯೀಕರಣ, ಎಣ್ಣೆಕಾಳುಗಳು, ದ್ವಿದಳ ಧಾನ್ಯ ಮತ್ತು ಕೃಷಿ ಸಮುದಾಯದ ಸ್ವಾವಲಂಬನೆಯ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ-ಶಾಲಾ ಶಿಕ್ಷಣದ ಅನುಷ್ಠಾನ, ರಾಷ್ಟ್ರೀಯ ಶಿಕ್ಷಣ ನೀತಿ-ಉನ್ನತ ಶಿಕ್ಷಣದ ಅನುಷ್ಠಾನ ಮತ್ತು ನಗರ ಆಡಳಿತದ ಬಗ್ಗೆ ಚರ್ಚೆ ನಡೆದಿದೆ. ಮಹತ್ವದ ಸಭೆಗೆ ತೆಲಂಗಾಣ ಸಿಎಂ ಗೈರಾಗಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳು ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆ. ಗವರ್ನರ್‌ಗಳು, ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಮತ್ತು ಕೇಂದ್ರ ಸಚಿವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.