ತುಂಬಿ ಹರಿದ ತುಂಗಭದ್ರಾ.. ನಿಷೇಧಿತ ಪ್ರದೇಶದಲ್ಲಿ ಮಿತಿ ಮೀರಿದ ಜನ
ಒಂದೆಡೆ ತುಂಗಭದ್ರಾ ನದಿನೀರು ಹೆಚ್ಚಳವಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೊಂದೆಡೆ ಅಪಾಯ ಕಣ್ಣಮುಂದೆ ಕಾಣುತ್ತಿದ್ದರೂ ಅದನ್ನ ಲೆಕ್ಕಿಸದ ಜನ ಅದರತ್ತ ಹೋಗಿ ಆಟವಾಡುತ್ತಿರುವುದು ಕಂಡುಬಂದಿದೆ. ಹೌದು, ಈ ದೃಶ್ಯ ಕಂಡುಬಂದದ್ದು ಕೊಪ್ಪಳದ ಮುನಿರಾಬಾದ್ನಲ್ಲಿನ ತುಂಗಭದ್ರಾ ಅಣೆಕಟ್ಟಿಗೆ ಅಣತಿ ದೂರದಲ್ಲಿರುವ ಕಿರು ಸೇತುವೆಯಲ್ಲಿ. ಇಂದು ತುಂಗಭದ್ರಾ ಜಲಾಶಯದಲ್ಲಿ ಒಳಹರಿವು 69550 ಕ್ಯೂಸೆಕ್ ಇದ್ದು, 79599 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇಂದು ಭಾನುವಾರವಾಗಿರುವ ಹಿನ್ನೆಲೆ ಮಕ್ಕಳು, ವಯಸ್ಕರು, ಮಹಿಳೆಯರು ಹೀಗೆ ಎಲ್ಲಾ ವಯೋಮಾನದವರು ಜಲಾಶಯವನ್ನು ಕಣ್ಣುತುಂಬಿಕೊಳ್ಳಲು ಬಂದಿದ್ದಾರೆ. ಆದರೆ, ನಿಷೇಧಿತ ಪ್ರದೇಶದ ನದಿ ನೀರಲ್ಲಿ ಆಟವಾಡಲು ಮುಂದಾಗಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.