ಆಸ್ಪತ್ರೆಯಲ್ಲಿ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿಗೆ ನೃತ್ಯ ಮಾಡಲು ಒತ್ತಾಯ: ವಿಡಿಯೋ - ಕಮಲಾ ಪೂಜಾರಿಗೆ ನೃತ್ಯ ಮಾಡಲು ಒತ್ತಾಯ
ಕಟಕ್ (ಒಡಿಶಾ): ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಮಲಾ ಪೂಜಾರಿ ಅವರನ್ನು ಡಿಸ್ಚಾರ್ಜ್ ಮಾಡುವ ಮುನ್ನ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಬಲವಂತದಿಂದ ನೃತ್ಯ ಮಾಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಒಡಿಶಾದ ಪರಾಜ ಬುಡಕಟ್ಟು ಸಮುದಾಯದವರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ನಾನು ಎಂದಿಗೂ ನೃತ್ಯ ಮಾಡಲು ಬಯಸಲ್ಲ. ಆಸ್ಪತ್ರೆಯಲ್ಲಿ ನೃತ್ಯ ಮಾಡಲು ನಾನು ಪದೇ-ಪದೇ ನಿರಾಕರಿಸಿದೆ. ಆದರೆ, ಅವರು ಕೇಳಲಿಲ್ಲ. ಇದರಿಂದ ಬಲವಂತವಾಗಿ ನಾನು ನೃತ್ಯ ಮಾಡಬೇಕಾಗಿತ್ತು. ಆ ಸಮಯದಲ್ಲೂ ನಾನು ಅನಾರೋಗ್ಯದಿಂದ ಬಳಲುತ್ತಿದ್ದೆ ಎಂದ ಖುದ್ದು ಕಮಲಾ ಪೂಜಾರಿ ತಿಳಿಸಿದ್ದಾರೆ. ಸಾವಯವ ಕೃಷಿ ಉತ್ತೇಜಿಸಲು ಮತ್ತು ಭತ್ತ ಸೇರಿ ವಿವಿಧ ಬೆಳೆಗಳ 100ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಕಮಲಾ ಪೂಜಾರಿ ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.