ಕೊರೊನಾ ಸೋಂಕಿತ ವೃದ್ಧೆ ಸಾವು: ಮತ್ತಷ್ಟು ಆತಂಕಕ್ಕೊಳಗಾದ ವಿಜಯಪುರ ಮಂದಿ - Vijayapura Corona News
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆ ನಿನ್ನೆಯಷ್ಟೇ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈಗ 13ಕ್ಕೆ ಏರಿದೆ. ಈವರೆಗೆ ಜಿಲ್ಲೆಯ 616 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 414 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಕೇವಲ ಬಡಾವಣೆಗಳಲ್ಲಿ ಹೆಚ್ಚೆಚ್ಚು ಕಂಡು ಬರುತ್ತಿದ್ದ ಪಾಸಿಟಿವ್ ಪ್ರಕರಣಗಳು ಈಗ ಸರ್ಕಾರಿ ಕಚೇರಿಗಳಲ್ಲೂ ಕಾಣಿಸತೊಡಗಿದೆ. ವಿದ್ಯುತ್ ಸರಬರಾಜು ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಜಲ ಮಂಡಳಿಯ ಸಿಬ್ಬಂದಿಗಳಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿರುವ ಕಾರಣ ಈ ಕಚೇರಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಸ್ಯಾನಿಟೈಸರ್ ಸಿಂಪಡಿಸಿ 24 ಗಂಟೆಯೊಳಗೆ ಮತ್ತೆ ಕಚೇರಿಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಜಿಲ್ಲೆಯಲ್ಲಿ 97 ಪ್ರದೇಶಗಳನ್ನು ಕಂಟೇನ್ಮೇಂಟ್ ಝೋನ್ ಎಂದು ಗುರುತಿಸಿದ್ದು, ಅಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.