ರಾಷ್ಟ್ರಪತಿ ಆಗಮನಕ್ಕೆ ಶೃಂಗಾರಗೊಳ್ಳುತ್ತಿದೆ ಹುಬ್ಬಳ್ಳಿ.. ಮದುವಣಗಿತ್ತಿಯಂತೆ ಕಂಗೊಳಿಸಲಿದೆ ಅವಳಿನಗರ - ಜಿಮ್ ಖಾನ ಮೈದಾನ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆ. 26ರಂದು ಪೌರ ಸನ್ಮಾನ ಹಮ್ಮಿಕೊಂಡಿರುವ ಬೆನ್ನಲ್ಲೇ, ನಗರದ ಹದಗೆಟ್ಟ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಕ್ಕಿದ್ದು, ಸ್ವಚ್ಛತಾ ಕೆಲಸಗಳು ಭರದಿಂದ ಸಾಗಿವೆ. ರಾಷ್ಟ್ರಪತಿ ಆಗಮಿಸುವ ಗೋಕುಲ ರಸ್ತೆಯ ವಿಮಾನ ನಿಲ್ದಾಣದಿಂದ ದೇಶಪಾಂಡೆ ನಗರದ ಜಿಮ್ ಖಾನ ಮೈದಾನದವರೆಗಿನ ಮಾರ್ಗಗಳಲ್ಲಿರುವ ತಗ್ಗು–ಗುಂಡಿಗಳನ್ನು ಪಾಲಿಕೆ ಸಮರೋಪಾದಿಯಲ್ಲಿ ಮುಚ್ಚುತ್ತಿದೆ. ಹಳೇ ವಿದ್ಯುತ್ ಕಂಬಗಳನ್ನು ತೆರವು ಮಾಡುತ್ತಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೊಸ ಕಂಬಗಳನ್ನು ಅಳವಡಿಸುತ್ತಿದೆ. ನೆಲ ಕಚ್ಚಿದ್ದ ಮೈದಾನದ ಬಳಿ ಹರಿಯುವ ನಾಲೆಯ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೈದಾನದ ಸುತ್ತಲೂ ಇರುವ ರಸ್ತೆಗಳ ಬದಿಯ ಕಳೆಗಳನ್ನು ಕಿತ್ತು ಹಾಕಿ, ದೂಳನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಗೋಕುಲ ರಸ್ತೆಯ ಹೋಟೆಲ್ ಫರ್ನ್ ಮತ್ತು ಸವಾಯಿ ಗಂಧರ್ವ ಸಭಾಭವನದ ಬಳಿಯ ನಾಲಾದಲ್ಲಿ ಹೂಳೆತ್ತಿ, ತಡೆಗೋಡೆ ಮೇಲೆ ತಂತಿ ಬೇಲಿ ಹಾಕಲು ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಆಗಮನಕ್ಕೆ ಅವಳಿನಗರ ಮದುವಣಗಿತ್ತಿಯಂತೆ ಶೃಂಗಾರಗೊಳುತ್ತಿದೆ.
Last Updated : Sep 24, 2022, 1:38 PM IST