ಆನ್ಲೈನ್ನಲ್ಲಿ ಹಣ ವರ್ಗಾವಣೆ.. ನಕಲಿ ಮೆಸೇಜ್ ತೋರಿಸಿ ಚಿನ್ನದಂಗಡಿ ಮಾಲೀಕನಿಗೆ ವಂಚನೆ - ಈಟಿವಿ ಭಾರತ ಕನ್ನಡ
ಬೆಂಗಳೂರು : ಚಿನ್ನ ಖರೀದಿಸಿದ ಗ್ರಾಹಕನೊಬ್ಬ ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಆಗಿದೆ ಎಂದು ನಕಲಿ ಮೆಸೇಜ್ ತೋರಿಸಿ ವಂಚಿಸಿ ಪರಾರಿಯಾದ ಘಟನೆ ಮಾಗಡಿ ರಸ್ತೆಯ ಮಹಾವೀರ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜುಲೈ 19ರಂದು ಆಭರಣದ ಅಂಗಡಿಗೆ ಬಂದಿದ್ದ ಕಾರ್ತಿಕ್ ಎಂಬಾತ 19,000 ರೂ. ಮೌಲ್ಯದ ಚಿನ್ನದ ಉಂಗುರ ಖರೀದಿಸಿದ್ದ. ಬಳಿಕ ಅಂಗಡಿಯಲ್ಲಿದ್ದ ಪಾರಸ್ಮಾಲ್ ಎಂಬುವರಿಗೆ ಆನ್‌ಲೈನ್ ನಲ್ಲಿ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ನೋಟಿಫಿಕೇಶನ್ ತೋರಿಸಿ ನಿಧಾನವಾಗಿ ಕಾಲ್ಕಿತ್ತಿದ್ದ. ತಿಂಗಳ ಕೊನೆಯಲ್ಲಿ ಆಭರಣದ ಅಂಗಡಿಯಲ್ಲಿ ಹಣದ ಲೆಕ್ಕಾಚಾರ ಹಾಕುವಾಗ ವ್ಯತ್ಯಾಸ ಕಂಡು ಬಂದಿದ್ದು, ಈ ಬಗ್ಗೆ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ವಿರುದ್ಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.