ಶ್ರೀಗಂಧ ಬೆಳೆಯಲು ರೈತರಿಗೆ ಸರ್ಕಾರ ನೀಡ್ತಿಲ್ಲ ರಕ್ಷಣೆ: ರೈತನ ವಿಡಿಯೋ ವೈರಲ್ - Loot the sandalwood trees
ಚಿತ್ರದುರ್ಗ: ಶ್ರೀಗಂಧ ಮರಗಳನ್ನು ಬೆಳೆಸಲು ಸರ್ಕಾರ ಹಸಿರು ನಿಶಾನೆ ತೋರುವ ಮುಖೇನಾ ರೈತರಿಗೆ ಅನೇಕ ಸಬ್ಸಿಡಿಗಳನ್ನು ನೀಡುತ್ತ ಬಂದಿದೆ. ಶ್ರೀಗಂಧ ಬೆಳೆಯಲು ಮುಕ್ತ ಅವಕಾಶ ಕಲ್ಪಿಸಿದ್ದಾರಾದರು ರೈತರಿಗೆ ರಕ್ಷಣೆ ನೀಡುವಲ್ಲಿ ಮಾತ್ರ ಸರ್ಕಾರ ವಿಫಲ ಆಗಿದೆ ಎಂದು ರೈತನೋರ್ವ ವಿಡಿಯೋ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೀಗ ಹಲವು ವರ್ಷಗಳಿಂದ ರೈತರು ಕಷ್ಟಪಟ್ಟು ಬೆಳೆಸಿದ್ದ ಶ್ರೀಗಂಧದ ಮರಗಳು ಖದೀಮರು ಕದಿಯುತ್ತಿರುವುದ್ದರಿಂದ ರೈತರು ಹೈರಾಣಾಗಿದ್ದಾರೆ. ಶ್ರೀಗಂಧ ಮರಗಳನ್ನು ಲೂಟಿ ಮಾಡಲು ತೋಟಕ್ಕೆ ಲಗ್ಗೆ ಇಡುವ ಕಳ್ಳರನ್ನು ಹಿಡಿಯಲು ಸಾಕಷ್ಟು ರೈತರು ಹರಸಾಹಸಪಡುವಾಗ ಹಲ್ಲೆಗೊಳಗಾಗಿರುವ ಉದಾಹರಣೆಗಳು ಇವೆ. ಇದರಿಂದ ಮರಗಳನ್ನು ರಕ್ಷಿಸಿಕೊಳ್ಳಲಾಗದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದ ದಿನೇಶ್ ಎಂಬ ರೈತ ವಿಡಿಯೋ ಒಂದರಲ್ಲಿ ಸರ್ಕಾರಕ್ಕೆ ಹಿಗ್ಗಮುಗ್ಗ ಜಾಡಿಸಿದ್ದಾನೆ. ರೈತ ದಿನೇಶ್ ಅವರ ತೋಟದಲ್ಲಿ ಸಾಕಷ್ಟು ಬಾರಿ ಶ್ರೀಗಂಧ ಕಳ್ಳತನ ಆಗಿದ್ದರಿಂದ ಈ ನಿರ್ಧಾರಕ್ಕೆ ಬಂದು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಆ ಮೂಲಕ ಶ್ರೀ ಗಂಧ ಬೆಳೆಯುವವರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.