ಅಮವಾಸ್ಯೆ, ಹುಣ್ಣಿಮೆಗೆ ಯಾರ್ಯಾರಿಗೋ, ಏನೇನೋ ಅನ್ಸುತ್ತೆ: ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ವ್ಯಂಗ್ಯ
ಚಿಕ್ಕಮಗಳೂರು: ಅಮಾವಾಸ್ಯೆ-ಹುಣ್ಣಿಮಿಗೆ ಯಾರ್ಯಾರಿಗೋ ಏನೇನೋ ಆಗುತ್ತೆ. ಅವರು ಸರಿ ಇದ್ದಾರೆ ಅನ್ನೋಕಾಗುತ್ತಾ?. ಅದು ಅವರಿಗೆ ಇರುವ ರೋಗ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂದು ಹೇಳುವ ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಆದ 3 ತಿಂಗಳಿಂದ ಹೇಳುತ್ತಿದ್ದಾರೆ. ಕಾಂಗ್ರೆಸ್ನವರ ವರದಿ ನಿಜವಾಗಿದ್ದರೆ, ಇಷ್ಟೊತ್ತಿಗೆ 10 ಸಲ ಮುಖ್ಯಮಂತ್ರಿ ಬದಲಾವಣೆಯಾಗಬೇಕಿತ್ತು ಎಂದರು. ಬೆಂಗಳೂರಿನ ಈದ್ಗಾ ಮೈದಾನ ವಿವಾದದ ಬಗ್ಗೆ ಪ್ರತಿಕ್ರಿಯಿಸುತ್ತಾ, ಜಾಗದಲ್ಲಿ ಗಣೇಶೋತ್ಸವ ಮಾಡಬೇಡಿ ಎಂದು ಹೇಳುವ ಅಧಿಕಾರ ಜಮೀರ್ ಅಹ್ಮದ್ಗೆ ಕೊಟ್ಟವರ್ಯಾರು, ಅವರೇನಾದರೂ ವಿಶೇಷಾಧಿಕಾರಿನಾ ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಗಣೇಶೋತ್ಸವಕ್ಕೆ ಅವಕಾಶ ಕೊಡಬೇಕೋ ಬೇಡವೋ ಎನ್ನುವುದನ್ನು ಅಲ್ಲಿರುವ ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ. ಎಲ್ಲರೂ ಒಂದಾಗಿ ಜಾತೀಯತೆ, ಅಸ್ಪೃಶ್ಯತೆ, ಯಾವ ಭಾವ ಇಲ್ಲದೇ ಆಚರಿಸುವ ಹಬ್ಬ ಅದನ್ನು ಮಾಡಬೇಕೋ, ಬಿಡಬೇಕೋ ಎನ್ನುವುದಕ್ಕೆ ಜಮೀರ್ ಅವರ ಅಪ್ಪಣೆ ಪಡೆಯಬೇಕು ಎನ್ನುವುದೇ ದುರದೃಷ್ಠಕರ. ಅಲ್ಲದೇ ಜಮೀರ್ ಅಹ್ಮದ್ ಉತ್ಸವಕ್ಕೆ ಬಿಡುವುದಿಲ್ಲ ಎನ್ನುವುದು ಅಸಹಿಷ್ಣುತೆ ಎಂದರು.