ಬಟ್ಟೆ ಅಂಗಡಿಯಲ್ಲಿ ಕೈಚಳಕ ತೋರಿಸಿದ ಬುರ್ಖಾಧಾರಿ ಮಹಿಳೆ: ವಿಡಿಯೋ ವೈರಲ್ - ಟೆಕ್ಸ್ ಟೈಲ್ಸ್ಗೆ ಬಂದಿರುವ ಬುರ್ಖಾಧಾರಿ ಮಹಿಳೆ
ಮಂಗಳೂರು: ಬಟ್ಟೆ ಅಂಗಡಿಯಲ್ಲಿ ಕೈಚಳಕ ತೋರಿಸಿರುವ ಮಹಿಳೆಯ ವಿಡಿಯೋವೊಂದು ವೈರಲ್ ಆಗಿದೆ. ಕಾವೂರಿನ ದುರ್ಗಾ ಪ್ರಸಾದ್ ಕಾಂಪ್ಲೆಕ್ಸ್ನಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ಸ್ಗೆ ಬಂದಿರುವ ಬುರ್ಖಾಧಾರಿ ಮಹಿಳೆಯೊಬ್ಬಳು ಬಟ್ಟೆ ಖರೀದಿಸಲು ವಸ್ತ್ರಗಳನ್ನು ನೋಡುತ್ತಾಳೆ. ಬಳಿಕ ಹ್ಯಾಂಗರ್ನೊಂದಿಗೆ ಸಲ್ವಾರ್ ಒಂದನ್ನು ತೆಗೆದುಕೊಂಡು ವಸ್ತ್ರ ಮಳಿಗೆ ಸಿಬ್ಬಂದಿ ಇರದ ಕಡೆಗೆ ಬಂದ ಆಕೆ ಬಟ್ಟೆ ನೋಡುತ್ತಿರುವಂತೆ ನಟಿಸಿ ಅಲ್ಲಿಯೇ ಇದ್ದ ಸೀರೆಯ ಕಟ್ಟೊಂದನ್ನು ಬುರ್ಖಾದೊಳಗೆ ಬಚ್ಚಿಡುತ್ತಾಳೆ. ಬಳಿಕ ಏನೂ ಆಗದವಳಂತೆ ಸಿಬ್ಬಂದಿಯೊಂದಿಗೆ ವ್ಯವಹರಿಸಿ ಹೋಗಿದ್ದಾಳೆ. ಸಿಸಿಟಿವಿ ಪರಿಶೀಲಿಸಿದಾಗ ಬುರ್ಖಾಧಾರಿ ಮಹಿಳೆ ಸೀರೆಯ ಕಟ್ಟನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಸೆ.26 ರಂದು ಅಂಗಡಿ ಮಾಲೀಕ ಸಂದೇಶ್ ಶೆಟ್ಟಿ ಅವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.