ದೇಶದ ತುಂಬೆಲ್ಲಾ ಭಯದ ವಾತಾವರಣವಿದೆ: ದೇವನೂರು ಮಹಾದೇವ - ಭಾರತ್ ಬಂದ್ಗೆ ಮೈಸೂರಿನಲ್ಲಿ ಸಾಹಿತಿಗಳಿಂದ ಬೆಂಬಲ
ದೇಶದ ತುಂಬೆಲ್ಲ ಈಗ ಭಯದ ವಾತಾವರಣವಿದ್ದು, ರೈತರ ಕಷ್ಟ ಕೇಳುವವರೇ ಇಲ್ಲದಂತಾಗಿದೆ. ಸಂವಿಧಾನವನ್ನು ಕಾಲ ಕಸದಂತೆ ನೋಡಲಾಗುತ್ತಿದೆ ಎಂದು ಹಿರಿಯ ಸಾಹಿತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದೇವನೂರು ಮಹಾದೇವ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಭಾರತ್ ಬಂದ್‌ನಲ್ಲಿ ಭಾಗವಹಿಸಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ದೇಶದಲ್ಲಿ ಸ್ವಯಂಪ್ರೇರಿತರಾಗಿ ಬಂದ್‌ನಲ್ಲಿ ನಾಗರೀಕರು ಭಾಗವಹಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ರು. ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸುವ ರೈತರನ್ನು ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಂಬಿಸುವ ಪರಿಪಾಠ ನಡೆಯುತ್ತಿದೆ. ಇದು ಒಳ್ಳೆಯದೆಲ್ಲ ಎಂದರು. ಸಂಘ ಪರಿವಾರದವರು ವಂಚನೆ, ದ್ರೋಹ ಹಾಗೂ ಕಠೋರತೆಯ ಬಿಂಬವಾಗಿದ್ದಾರೆ. ನೀವು ಮನುಷ್ಯರಾಗಿ ಬದಲಾಗಿ ರೈತರಿಗೆ ಒಳ್ಳೆಯದನ್ನು ಮಾಡಿ. ಇದರಿಂದ ನಿಮಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು, ರೈತರಿಗೂ ಒಳ್ಳೆಯದು ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.