ಪ್ರವಾಹದಲ್ಲಿ ಸಿಲುಕಿದ್ದ ತಾಯಿ-ಮಗಳನ್ನು ರಕ್ಷಿಸಿದ ರೋಣ ತಾಲೂಕಿನ ಸಾಹಸಿ ಯುವಕರು! - flood in gadag
ಗದಗ: ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಹಾಗೂ ಮಗಳನ್ನು ಸಾಹಸಿ ಯುವಕರು ರಕ್ಷಿಸಿರೋ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಹಡಗಲಿ ಗ್ರಾಮದಲ್ಲಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ವೃದ್ಧೆ ಕಲ್ಲಮ್ಮ ಎದ್ದು ಬರಲಾಗದ ಸ್ಥಿತಿಯಲ್ಲಿದ್ದರು. ಹೀಗಾಗಿ ಹೆಲಿಕಾಪ್ಟರ್ ಮೂಲಕ ರಕ್ಷಣೆಗಾಗಿ ಆಗಮಿಸಿದ್ದಾಗ, ಆಕೆಗೆ ಏಳಲೂ ಆಗದ ಸ್ಥಿತಿಯಿಂದ ಅನಿವಾರ್ಯವಾಗಿ ಅಲ್ಲೇ ಉಳಿಯಬೇಕಾಯ್ತು. ಈಕೆಯ ಆರೈಕೆಗಾಗಿ ಮಗಳು ಜಯಶ್ರೀ ಸಹ ಅಲ್ಲಿಯೇ ಉಳಿದಿದ್ದಳು. ಇಂದು ಹೊಳೆಹಡಗಲಿ ಗ್ರಾಮದ ಮಂಜು ದೊಡ್ಡಮನಿ, ಮೈಲಾರ ಮಡಿವಾಳರ, ಶೇಖಪ್ಪ ತಾಳಿ ಹಾಗೂ ಅರುಣ್ ಚಲವಾದಿ ಎಂಬ ಯುವಕರು ಎದೆಯೆತ್ತರ ನಿಂತಿದ್ದ ನೀರಲ್ಲಿ ಈಜಿ ಹೋಗಿ ಅಲ್ಲಿಯೇ ಇದ್ದ ಮೇಲ್ಛಾವಣಿ ಉಪಯೋಗಿಸಿ ತಗಡಿನ ಮೇಲೆ ವೃದ್ಧೆಯನ್ನು ಮಲಗಿಸಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.