"ನೀನು ಒಂಟಿಯಲ್ಲ"- ಮಲ್ಪೆ ಬೀಚ್ ಮರಳಲ್ಲಿ ಮೂಡಿದ ಜಾಗೃತಿ ಸಂದೇಶ - Rare Sand Art at Mulpe Beach
ಉಡುಪಿ ಜಿಲ್ಲೆಯ ಮಲ್ಪೆ ಬೀಚ್ನಲ್ಲಿ ಅಪರೂಪದ ಸ್ಯಾಂಡ್ ಆರ್ಟ್ ರಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಈ ವಿಶಿಷ್ಟ ಕಲಾಕೃತಿ ಪ್ರವಾಸಿಗರ ಗಮನ ಸೆಳೆದಿದೆ. ಮದ್ಯ ವ್ಯಸನದಿಂದ ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆಯನ್ನು ನೀಡುವ "ನೀನು ಒಂಟಿಯಲ್ಲ" ಎನ್ನುವ ಸಂದೇಶದೊಂದಿಗೆ ಜನ ಜಾಗೃತಿ ಸಾರುವ ಮರಳು ಶಿಲ್ಪದ ರಚನೆಯನ್ನು ಕಲಾವಿದ ಹರೀಶ್ ಸಾಗಾ ಮಾಡಿದ್ದಾರೆ. ಮದ್ಯದ ಬಾಟಲಿಯ ಮದ್ಯೆ ಸಿಲುಕಿದ ಮಗು ಕಣ್ಣೀರು ಹಾಕುತ್ತಾ ಸಹಾಯಕ್ಕಾಗಿ ಹಾತೊರೆಯುತ್ತಿರುವ ಚಿತ್ರಣ ಮನಮುಟ್ಟುವಂತಿದೆ. ಒಡೆದ ಗಾಜಿನ ಬಾಟಲಿ ಛಿದ್ರಗೊಂಡಂತೆ ಮತ್ತು ಇನ್ನೊಬ್ಬಳು ಬಾಲೆ ಹತಾಶೆಯಾಗಿ ಕುಳಿತಿರುವ ದೃಶ್ಯವನ್ನೂ ಈ ಮರಳುಶಿಲ್ಪದಲ್ಲಿ ಕಾಣಬಹುದು. ಸುಮಾರು 3.5 ಅಡಿ ಎತ್ತರ ಮತ್ತು 7 ಅಡಿ ಅಗಲದ ಈ ಕಲಾಕೃತಿಯನ್ನು ಒಂದಿಡೀ ದಿನ ಕುಳಿತು ರಚಿಸಲಾಗಿದೆ.