ಕೊರೊನಾ ಸಮಯದಲ್ಲಿ ಮಾಡಿದ ಮತದಾನ ನೆನಪಿನಲ್ಲಿ ಉಳಿಯುವಂತದ್ದು: ಬಿಜೆಪಿ ಅಭ್ಯರ್ಥಿ ಮುನಿರತ್ನ - ರ್. ಆರ್ ನಗರದಲ್ಲಿ ಮತದಾನ
ಬೆಂಗಳೂರು: ಕೊರೊನಾ ಸಮಯದಲ್ಲಿ ಮತ ಚಲಾವಣೆ ಮಾಡಿದ್ದು ಇತಿಹಾಸದ ದಾಖಲೆಯಲ್ಲಿ ಉಳಿಯಲಿದೆ. ಕ್ಷೇತ್ರದ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಮನವಿ ಮಾಡಿದ್ದಾರೆ. ವೈಯಾಲಿಕಾವಲ್ನ ನಿವಾಸದಲ್ಲಿ ಮಾತನಾಡಿದ ಅವರು, ಮತದಾರರ ಬಳಿ ಮತ ಭಿಕ್ಷೆ ಬೇಡಿದ್ದೇನೆ, ಮತಭಿಕ್ಷೆ ಕೊಟ್ಟರೆ ಈ ಕ್ಷೇತ್ರದ ಅಭಿವೃದ್ಧಿ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. ಕೊರೊನಾ ಸಮಯದಲ್ಲಿ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಬಳಸಿ ಮತದಾನ ಮಾಡಿರುವುದು ನೆನಪಿನಲ್ಲಿ ಉಳಿಯುವಂತಹದ್ದು. ಇಂತಹ ಅವಕಾಶ ಬಹುಶಃ ಮತ್ತೆ ಯಾರಿಗೂ ಸಿಗುವುದಿಲ್ಲ. ಆದ್ದರಿಂದ ಎಲ್ಲರೂ ಬಂದು ಮತದಾನ ಮಾಡಬೇಕು ಎಂದು ಹೇಳಿದ್ದಾರೆ.