ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಸೇತುವೆ... ಶಾಲಾ ಮಕ್ಕಳ ಪರದಾಟಕ್ಕೆ ಕೊನೆಗೂ ಸಿಗುತ್ತಿದೆ ಮುಕ್ತಿ - ರಸ್ತೆ ನಿರ್ಮಾಣ
ಧಾರವಾಡ ಜಿಲ್ಲೆಯ ಹಾರೋಬೆಳವಡಿ ಹಾಗೂ ಬೆಳಗಾವಿ ಜಿಲ್ಲೆಯ ಇನಾಮಹೊಂಗಲ ಮಧ್ಯದ ಸೇತುವೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡು ಮಕ್ಕಳು ಗ್ರಾಮಸ್ಥರು ಕಷ್ಟಪಡುವಂತಾಗಿತ್ತು. ಪ್ರವಾಹದ ನಂತರ ಶಾಲೆಗೆ ಹೋಗುವುದಕ್ಕೂ ಇಲ್ಲಿನ ಮಕ್ಕಳು ಪರದಾಡುವಂತಹ ಸ್ಥಿತಿ ಎದುರಾಗಿತ್ತು. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಹಳ್ಳದ ಮಧ್ಯದ ಪೈಪ್ ಮೇಲೆ ದಾಟಲು ಹರಸಾಹಸ ಪಡುತ್ತಿದ್ದರು. ಇಲ್ಲಿನ ಇನಾಮಹೊಂಗಲದಿಂದ ಹಾರೋಬೆಳವಡಿಗೆ ಶಾಲೆಗೆ ಬರುವ ಮಕ್ಕಳನ್ನು ಕೈ ಹಿಡಿದು ಪೈಪ್ ಮೇಲಿಂದ ಜನರು ಮಕ್ಕಳನ್ನು ದಾಟಿಸುತ್ತಿದ್ದರು. ಮಕ್ಕಳು ಹರಸಾಹಸ ಪಟ್ಟು ಹಳ್ಳ ದಾಟುತ್ತಿದ್ದ ದೃಶ್ಯಗಳು ನಿಜಕ್ಕೂ ಅಯ್ಯೋ ಎನ್ನುವಂತಿತ್ತು. ಕಡೆಗೂ ಎಚ್ಚೆತ್ತಿರುವ ಸಂಬಂಧಪಟ್ಟ ಇಲಾಖೆ, ಇಲ್ಲಿ ರಸ್ತೆ ನಿರ್ಮಾಣ ಕಾರ್ಯ ಶುರುಮಾಡಿದೆ.