ವರುಣನ ಆರ್ಭಟಕ್ಕೆ ನೆಲಕಚ್ಚಿದ ಭತ್ತದ ಬೆಳೆ: ಅನ್ನದಾತನಿಗೆ ಇನ್ನಷ್ಟು ಸಂಕಷ್ಟ
ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತ ಸಂಪೂರ್ಣ ನಾಶವಾಗಿದೆ. ತಾಲೂಕಿನ ಬಾತಿ ಹಾಗೂ ಕುಂದುವಾಡದಲ್ಲಿ ಸುಮಾರು 90 ಎಕರೆಯಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಹದಿನೈದು ದಿನಗಳು ಕಳೆದಿದ್ದರೆ ಭತ್ತ ಕಟಾವು ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ಬೆಳೆಯೂ ಸಂಪೂರ್ಣ ಹಾಳಾಗಿದ್ದು, ದಿನೇ ದಿನೇ ದರ ಹೆಚ್ಚಾಗುತ್ತಿದೆ. ಆದರೆ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.