ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ ವಿನೂತನ ಪ್ರತಿಭಟನೆ!
ಶಿವಮೊಗ್ಗ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆಯೆಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಕಾರು, ಬೈಕ್ ಓಡಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಇಂದು ಎತ್ತಿನಗಾಡಿ, ಜಟಕಾಗಾಡಿ, ಸೈಕಲ್ ಓಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಅಕ್ಕಿ ಸೇರಿದಂತೆ ದಿನಸಿ ವಸ್ತುಗಳನ್ನು ತಲೆ ಮೇಲೆ ಹೂತ್ತು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸೈಕಲ್ ತುಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯು ಶಿವಪ್ಪ ನಾಯಕ ವೃತ್ತದಿಂದ ಎ.ಎ. ವೃತ್ತ, ನೆಹರು ರಸ್ತೆ, ಟಿ.ಎಸ್.ಬಿ ವೃತ್ತದ ಮೂಲಕ ಬಾಲರಾಜ ಅರಸ ರಸ್ತೆಯ ಮೂಲಕ ತೆರಳಿ ಡಿಸಿ ಕಚೇರಿ ತಲುಪಿತು.