ರಾತ್ರಿಯಿಡೀ ಬಾವಿಯಲ್ಲಿ ಬಿದ್ದು ಒದ್ದಾಡಿದ ಕಾಡು ಹಂದಿ ರಕ್ಷಣೆ - ಬಾವಿಗೆ ಬಿದ್ದ ಕಾಡು ಹಂದಿ ರಕ್ಷಣೆ
ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಹಂದಿಯೊಂದು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಒದ್ದಾಡಿದ ಘಟನೆ ಕಾರವಾರ ನಗರದ ಬೈತಖೋಲ್ನಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಕಾಡಿನಿಂದ ನಗರದ ಬೈತಖೋಲ್ ಬಳಿ ಬಂದಿದ್ದ ಹಂದಿ ಊರಿನೊಳಗೆ ನುಗ್ಗಿತ್ತು. ಈ ವೇಳೆ ಹಂದಿಯನ್ನು ಕಂಡು ನಾಯಿಗಳು ಓಡಿಸಿಕೊಂಡು ಹೋಗಿವೆ. ಪ್ರಾಣಭಯದಿಂದ ಓಡುವ ಭರದಲ್ಲಿ ಹಂದಿ ಬಾವಿಗೆ ಬಿದ್ದಿದೆ. ಬೆಳಗ್ಗೆವರೆಗೂ ನೀರಿನಲ್ಲಿ ಒದ್ದಾಟ ನಡೆಸಿದೆ. ಬೆಳಗ್ಗೆ ಬಾವಿಯಿಂದ ಶಬ್ದ ಬರುತ್ತಿರುವುದನ್ನು ಗಮನಿಸಿದ್ದ ಸ್ಥಳೀಯರಿಗೆ ಹಂದಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಂದಿಯನ್ನು ರಕ್ಷಿಸಿ ಪುನಃ ಕಾಡಿಗೆ ಬಿಟ್ಟಿದ್ದಾರೆ.