ಪಾರ್ಕಿಂಗ್ ವಿಚಾರಕ್ಕೆ ಟ್ರ್ಯಾಕ್ಟರ್ ಮಾಲೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ - ಯಾದಗಿರಿ ಸುದ್ದಿ
ಯಾದಗಿರಿ: ಟ್ರ್ಯಾಕ್ಟರ್ ಪಾರ್ಕಿಂಗ್ ವಿಚಾರವಾಗಿ ಪೆಟ್ರೋಲ್ ಬಂಕ್ನ ವಾಚ್ಮನ್ನ ಪುತ್ರ ಟ್ರ್ಯಾಕ್ಟರ್ ಮಾಲೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ನಗರದ ಹೊರಭಾಗದ ಶುಭಂ ಪೆಟ್ರೋಲ್ ಬಂಕ್ನಲ್ಲಿ ಘಟನೆ ನಡೆದಿದ್ದು, ಬಂಕ್ನ ವಾಚ್ಮನ್ ಮಲ್ಲಪ್ಪ ಎಂಬುವವರ ಪುತ್ರ ಮಾಳಪ್ಪ ಬಂಕ್ನ ಒಳಗಡೆ ಟ್ರ್ಯಾಕ್ಟರ್ ಪಾರ್ಕಿಂಗ್ ಮಾಡಿದ್ದ ಮುಂಡರಗಿ ತಾಂಡಾದ ನಿವಾಸಿ ಮಲ್ಲು ಎಂಬಾತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು, ಆರೋಪಿ ಮಾಳಪ್ಪನಿಗಾಗಿ ಬಲೆ ಬೀಸಿದ್ದಾರೆ.