ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪುರ ಪ್ರವೇಶ: ಅದ್ಧೂರಿ ಉತ್ಸವ
ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಆರಾಧ್ಯ ದೇವಿಯಾಗಿರುವ ಶ್ರೀ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪುರ ಪ್ರವೇಶ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ ಕೆ ಗ್ರಾಮ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸಾವಿರಾರು ಭಕ್ತರ ನಡುವೆ ಚಿನ್ನದ ಪದ್ಮಾವತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಪದ್ಮಾವತಿ ದೇವಿಯು ಭಕ್ತರ ಕಷ್ಟಗಳನ್ನು ನಿವಾರಿಸುವ ಆರಾಧ್ಯ ದೈವವಾಗಿದ್ದಾಳೆ. ಈ ಮಂದಿರಕ್ಕೆ 400 ವರ್ಷಗಳ ಇತಿಹಾಸವಿದೆ. 23 ನೇ ತೀರ್ಥಂಕರವಾಗಿರುವ ಪಾರ್ಶ್ವನಾಥನ ಯಕ್ಷಿಣಿ ಪದ್ಮಾವತಿಯೂ ಆತನ ತಪಸ್ಸಿನ ಅವಧಿಯಲ್ಲಿ ಸಹಕಾರ ನೀಡಿದಳೆಂಬ ಪುರಾಣ ಈ ದೇವಸ್ಥಾನಕ್ಕಿದೆ. ಅಂದಿನಿಂದ ಆಕೆಯನ್ನು ಪಾರ್ಶ್ವನಾಥನ ಮಂದಿರದಲ್ಲಿ ಯಕ್ಷಿಣಿ ದೇವತೆ ಎಂದು ಪೂಜಿಸುವ ಪರಂಪರೆ ಮುಂದುವರೆದಿದೆ.