ಪ್ರವಾಹ ಭೀತಿ: 'ಮಹಾ' ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವ ಕರ್ನಾಟಕದ ಅಧಿಕಾರಿಗಳು - karnataka flood
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಕರ್ನಾಟಕದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಹಿಪ್ಪರಗಿ ಬ್ಯಾರೇಜ್ನಿಂದ 1 ಲಕ್ಷ 6 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಹೊರ ಹರಿಸುತ್ತಿದ್ದಾರೆ. ಇನ್ನು ರಾಜಾಪುರ ಬ್ಯಾರೇಜ್ನಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ 1 ಲಕ್ಷ 5 ಸಾವಿರದ 67 ಕ್ಯೂಸೆಕ್ ಇದೆ. ನದಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಳ್ಳಿ ಸೂಚನೆ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 24 ಜನರ ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು 10 ಬೋಟ್ ಸಿದ್ಧತೆ ಮಾಡಲಾಗಿದೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣನವರು ಜನ ಮತ್ತು ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.