ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಯಾವುದೇ ಹೊಸ ತಾಲೂಕನ್ನು ಸೇರಿಸಲು ಬರಲ್ಲ: ಅಮರನಾಥ ಪಾಟೀಲ
ಸಂವಿಧಾನದ 371(ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಸೇರಿಸಬೇಕೆಂಬ ಸಚಿವ ಶ್ರೀರಾಮುಲು ವಿಚಾರಕ್ಕೆ ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಮೊಳಕಾಲ್ಮೂರು ತಾಲೂಕನ್ನು ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಸೇರಿಸಬೇಕೆಂಬುದು ಶ್ರೀರಾಮುಲು ಅವರ ವೈಯಕ್ತಿಕ ವಿಚಾರ. ಅವರು ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಹಾಗೆ ಹೇಳಿರಬಹುದು. ಆದರೆ ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಯಾವುದೇ ಹೊಸ ತಾಲೂಕನ್ನು ಸೇರಿಸಲು ಬರೋದಿಲ್ಲ. ಹಿಂದೆ ಕಲಬುರಗಿ ವಿಭಾಗದಲ್ಲಿ ಇತ್ತು ಎನ್ನೋ ಕಾರಣಕ್ಕೆ ಹರಪನಹಳ್ಳಿಯನ್ನು ಕಲಂ 371(ಜೆ) ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಮೊಳಕಾಲ್ಮೂರು ಎಂದೂ ಕಲಬುರಗಿ ವಿಭಾಗದ ಭಾಗವೇ ಆಗಿಲ್ಲ. ಹಿಂದುಳಿದ ಪ್ರದೇಶದ ಅಭಿವೃದ್ಧಿ ದೃಷ್ಟಿಯಿಂದ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಹಾಗೆಂದು ಎಲ್ಲಾ ಹಿಂದುಳಿದ ತಾಲೂಕುಗಳನ್ನು ಇದರ ವ್ಯಾಪ್ತಿಗೆ ಸೇರಿಸಲು ಆಗಲ್ಲ. ಮೊಳಕಾಲ್ಮೂರು ತಾಲೂಕನ್ನು ಸೇರಿಸಲು ಬರೋದಿಲ್ಲ ಎಂದರು.