ಹೋರಾಟವಿಲ್ಲದೆ ದೇಶದಲ್ಲಿ ಬದಲಾವಣೆ ಸಾಧ್ಯವಿಲ್ಲ: ಕಾಗೋಡು ತಿಮ್ಮಪ್ಪ - ದೆಹಲಿ ಟ್ರ್ಯಾಕ್ಟರ್ ಪರೇಡ್
ಶಿವಮೊಗ್ಗ: ಹೋರಾಟದಿಂದ ಬದಲಾವಣೆ ಸಾಧ್ಯ. ರೈತರು ಹೋರಾಟವನ್ನು ಮೊಟಕುಗೊಳಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ. ದೆಹಲಿಯ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಶಿವಮೊಗ್ಗದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ನಡೆದ ರೈತರ ರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೋರಾಟದ ನೆಲವಾಗಿದೆ. ಪಂಜಾಬ್, ಹರಿಯಾಣ ಸೇರಿದಂತೆ ಅನೇಕ ರಾಜ್ಯದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ನೀವೆಲ್ಲಾ ಒಂದು ವರ್ಷವಾದರೂ ಸಹ ಹೋರಾಟ ನಡೆಸಬೇಕಾಗುತ್ತದೆ ಎಂದರು. ಹೋರಾಟವಿಲ್ಲದೆ ನಮ್ಮ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇದನ್ನು ಮುಂದುವರೆಸಬೇಕಿದೆ. ಈ ಹೋರಾಟದಿಂದ ಹೊಸ ಹೋರಾಟಕ್ಕೆ ನಾಂದಿಯಾಗಬೇಕು ಎಂದರು.