ಕೊರೊನಾ ಮಣಿಸೋದ್ಹೀಗೆ, ಸಿ ಕೆ ಅಚ್ಚುಕಟ್ಟು ಠಾಣೆ ಪೊಲೀಸರ ಕಿರುಚಿತ್ರ..
ಕೊರೊನಾ ಎಂಬ ವ್ಯಾಧಿ ದಿನದಿಂದ ದಿನಕ್ಕೆ ಬೆಂಗಳೂರು ಮಹಾನಗರದಲ್ಲಿ ದಟ್ಟವಾಗಿ ಹರಡುತ್ತಿದೆ. ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಲಕ್ಷಣವಂತೂ ಗೋಚರಿಸುತ್ತಿಲ್ಲ. ಅನಗತ್ಯ ಹೊರಗೆ ಓಡಾಡದೆ ಎಲ್ಲರೂ ಮನೆಯಲ್ಲಿದ್ದರೆ ಕೊರೊನಾ ವಿರುದ್ಧ ಗೆಲ್ಲಬಹುದಾಗಿದೆ ಎಂಬ ಸಾರಾಂಶವಿಟ್ಟುಕೊಂಡು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ವಿನೂತನ ಸಾಕ್ಷ್ಯಚಿತ್ರದ ಮೂಲಕ ಸಿಲಿಕಾನ್ ಸಿಟಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ನಗರ ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫೆಟ್ ಸಾರಥ್ಯದಲ್ಲಿ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಇನ್ಸ್ಸ್ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ಸಿಬ್ಬಂದಿ 6.44 ನಿಮಿಷಗಳ ಅರೆಸ್ಟ್ ಕೊರೊನಾ ಹೆಸರಿನಲ್ಲಿ ಕಿರುಚಿತ್ರ ನಿರ್ಮಿಸಿದ್ದಾರೆ. ಸುಮನ್ ಭಾರದ್ವಾಜ್ ಕಿರುಚಿತ್ರ ನಿರ್ದೇಶಿಸಿದ್ದಾರೆ. ಕೊರೊನಾ ವೈರಾಣು ವಿಷಯದಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಸುರಕ್ಷಿತವಾಗಿ ಮನೆಯಲ್ಲಿ ಇರಿ. ಅನಗತ್ಯ ಹೊರಗೆ ಬರದೆ ಆರಾಮಾಗಿ ಉಳಿದುಕೊಳ್ಳಿ. ಈ ಮೂಲಕ ಕೋಟ್ಯಂತರ ಜನರ ಬದುಕು ಕಸಿದುಕೊಂಡಿರುವ ಕೊರೊನಾ ವಿರುದ್ಧ ಗೆಲ್ಲಬಹುದು ಎಂದು ಚಿತ್ರದ ಮೂಲಕ ಸರಳವಾಗಿ ಹೇಳಿದ್ದಾರೆ.