ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಾಶಿವರಾತ್ರಿ ಸಂಭ್ರಮ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ನಗರದ ಶಿವ ದೇವಾಲಯ ಹಾಗೂ ಸಿದ್ದಾರೂಢ ಮಠದಲ್ಲಿ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ನಗರದ ರೈಲ್ವೆ ಸ್ಟೇಷನ್ ಬಳಿಯಲ್ಲಿರುವ ಶಿವನ ಮಂದಿರಕ್ಕೆ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ಶಿವನ ಮೂರ್ತಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಶಿವರಾತ್ರಿ ಆಚರಣೆ ಮಾಡುತ್ತಿದ್ದಾರೆ. ಸಿದ್ದಾರೂಢ ಮಠದಲ್ಲಿಯೂ ಶಿವರಾತ್ರಿ ಸಂಭ್ರಮ ಕಳೆಗಟ್ಟಿದೆ. ಮಠಕ್ಕೆ ಆಗಮಿಸುವ ಭಕ್ತರು ಶ್ರೀ ಸಿದ್ಧಾರೂಢ ಮತ್ತು ಗುರುನಾಥಾರೂಢರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಮಾತ್ರವಲ್ಲದೇ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದು, ಬೆಳಗ್ಗೆ 4 ಗಂಟೆಯಿಂದಲೇ ಕಾಕಡಾರತಿ, ರುದ್ರಾಭಿಷೇಕ ಸೇರಿದಂತೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.