ಮಹಾಶಿವರಾತ್ರಿ ಸಂಭ್ರಮ: ಸಿಲಿಕಾನ್ ಸಿಟಿ ದೇಗುಲಗಳಲ್ಲಿ ಶಿವನಿಗೆ ವಿಶೇಷ ಪೂಜೆ - ಬೆಂಗಳೂರಿನ ಕಾಡು ಮಲ್ಲೇಶ್ವರಂ ದೇವಾಲಯ
ಬೆಂಗಳೂರು: ಇಂದು ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಕ್ತರು ಉಪವಾಸ ಹಾಗೂ ಜಾಗರಣೆ ಮಾಡುವುದು ಈ ಹಬ್ಬದ ವಿಶೇಷತೆ. ಸಿಲಿಕಾನ್ ಸಿಟಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದ್ದು, ನಗರದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಕಾಡು ಮಲ್ಲೇಶ್ವರ, ಗವಿಗಂಗಾಧರೇಶ್ವರ ಹಾಗೂ ಹಳೇ ವಿಮಾನ ನಿಲ್ದಾಣ ಹೆಚ್ಎಎಲ್ ಬಳಿಯಿರುವ ಪ್ರಸಿದ್ಧ ಶಿವ ದೇಗುಲದಲ್ಲಿ ಜಲಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಎಂಎಲ್‌ಸಿ ಶರವಣ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನ ದರ್ಶನ ಪಡೆದರು. ರಾತ್ರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜತೆಗೆ ಜಾಗರಣೆಯನ್ನು ಮಾಡಲಾಗುತ್ತದೆ.