ಕುಂದಾಪುರದಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಉಡುಪಿಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮದ ಮಾಲಾಡಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಸೆರೆಯಾಗಿದೆ. ಶಾಲೆಯ ಪಕ್ಕದ ಅಕೇಶಿಯ ಮತ್ತು ಮಾವಿನ ಮರದ ತೋಪಿನಲ್ಲಿ ಆಗಾಗ ಕಾಣಿಸುತ್ತಿದ್ದ ಚಿರತೆಯನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದರು. ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಆದ ಕಾರಣ ತಿಂಗಳ ಹಿಂದೆ ಬೋನು ಇರಿಸಿ ಚಿರತೆಗಾಗಿ ಕಾದಿದ್ದರು. ಇದುವರೆಗೆ ಇದೇ ಪ್ರದೇಶದ ಸುತ್ತಮುತ್ತ ಒಟ್ಟು ಐದು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.