ಸರ್ಕಾರಿ ಶಾಲೆಗಳಿಗೆ ಅಡುಗೆ ಅನಿಲ ಪೂರೈಸಲು ಹೆಚ್ಚಿನ ಹಣ ವಸೂಲಿ: ಕರವೇ ಆರೋಪ - ಸರ್ಕಾರಿ ಶಾಲೆಗಳ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ಕರವೇ ಆರೋಪ
ಹಾವೇರಿ: ಜಿಲ್ಲೆಯ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಹೆಚ್ಚು ಹಣ ಪಡೆಯಲಾಗುತ್ತಿದೆ ಎಂದು ಕರವೇ ಆರೋಪಿಸಿದೆ. ಜಿಲ್ಲೆಯಲ್ಲಿ ಮಾತನಾಡಿದ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಯ್ಯ ಬಸರಿಹಳ್ಳಿಮಠ ಈ ಆರೋಪ ಮಾಡಿದ್ದಾರೆ. ಎರಡು ತಾಲೂಕುಗಳ ಸಿಲಿಂಡರ್ ಪೂರೈಕೆಯ ಗುತ್ತಿಗೆಯನ್ನ ಬಸವೇಶ್ವರ ಗ್ಯಾಸ್ ಏಜೆನ್ಸಿಗೆ ನೀಡಲಾಗಿದೆ. ಆದರೆ ಏಜೆನ್ಸಿ ಗುತ್ತಿಗೆ ಕರಾರಿನಲ್ಲಿ ನೀಡಿರುವ ಬೆಲೆಯೇ ಬೇರೆ, ಆದರೆ ಪೂರೈಕೆಗೆ ಪಡೆಯುತ್ತಿರುವ ಬೆಲೆನೇ ಬೇರೆ ಆಗಿದೆ. ಗುತ್ತಿಗೆ ನಿಯಮಾವಳಿಗಳನ್ನು ಏಜೆನ್ಸಿ ಗಾಳಿಗೆ ತೂರಿ ಹಣ ಪಡೆಯುತ್ತಿದೆ. ಈ ರೀತಿ ಕಳೆದ 10 ವರ್ಷಗಳಿಂದ ಏಜೆನ್ಸಿ ಹಗಲು ದರೋಡೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹಿಸಿದೆ.