ಮನೆಗೆ ನುಗ್ಗಿ ಮಹಿಳೆಯೊಂದಿಗೆ ಅನುಚಿತ ವರ್ತನೆ ಆರೋಪ: ವ್ಯಕ್ತಿಗೆ ಸ್ಥಳೀಯರಿಂದ ಥಳಿತ - koppal latest news
ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯ ಮನೆಗೆ ನುಗ್ಗಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಮಹಿಳೆಯ ಪತಿ ಹಾಗೂ ಸ್ಥಳೀಯರು ಸೇರಿ ಬಿಸಿಬಿಸಿ ಕಜ್ಜಾಯ ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ನಿನ್ನೆ ನಡೆದಿದೆ. ಹನುಂತಪ್ಪ ಕುರಿ ಎಂಬಾತ ಸ್ಥಳೀಯರಿಂದ ಏಟು ತಿಂದ ವ್ಯಕ್ತಿ. ಕುಕನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಕುರಿ ಮದ್ಯಪಾನ ಮಾಡಿ ತಳಕಲ್ ಗ್ರಾಮದ ಮಹಿಳೆಯೋರ್ವರ ಮನೆಗೆ ಹೋಗಿ ಅನುಚಿತವಾಗಿ ವರ್ತಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಆ ಮಹಿಳೆಯ ಪತಿ ಹಾಗೂ ಸ್ಥಳೀಯರು ಹನುಮಂತಪ್ಪ ಕುರಿಯ ಕೈ ಕಾಲನ್ನು ಹಗ್ಗದಿಂದ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಕುಕನೂರ ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.